Praveen Nettar | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿ ತೌಫಿಲ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ ಎನ್ಐಎ

ಬೆಂಗಳೂರು, ಮಾ 5: ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು(Praveen Nettar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೌಫಿಲ್ ಎಮ್ ಎಚ್ ಬಂಧಿತ ಆರೋಪಿ.

ಕೊಡಗು ಮೂಲದ ಆರೋಪಿಯನ್ನು ಬೆಂಗಳೂರಿನ ದಾಸರಹಳ್ಳಿಯಲ್ಲಿ ಬಂಧಿಸಲಾಗಿದೆ. ನಿನ್ನೆ ರಾತ್ರಿ 9:30 ರ ವೇಳೆಗೆ ಆರೋಪಿಯನ್ನು ಬಂಧಿಸಿದ್ದಾರೆ. ಆತ ತಲೆಮರೆಸಿಕೊಂಡಿದ್ದು, ಎನ್ಐಎ ಯು 5 ಲಕ್ಷ ರೂ ಬೃಹತ್ ಮೊತ್ತದ ಬಹುಮಾನ ಘೋಷಣೆ ಮಾಡಿತ್ತು. ಈತನ ಬಂಧನದ ಬಳಿಕ ಇತರ ಆರೋಪಿಗಳ ಸುಳಿವು ಸಿಗುವ ಸಾಧ್ಯತೆಯಿದೆ. ಆರೋಪಿ ನಿಷೇಧಿತ ಪಿಎಫ್ಐ ಕಾರ್ಯಕರ್ತನಾಗಿದ್ದ.

ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26ರಂದು ಬೆಳ್ಳಾರೆಯ ಅವರ ಕೋಳಿ ಅಂಗಡಿ ಬಳಿ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಹತ್ಯೆ ಪ್ರಕರಣವು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಬಿಜೆಪಿಗರಿಗೆ ಈ ಪ್ರಕರಣವು ಬಿಸಿ ತುಪ್ಪವಾಗಿತ್ತು. ಸಾಲು ಸಾಲು ಕಾರ್ಯಕರ್ತರ ಹತ್ಯೆಯಿಂದ ಬೇಸತ್ತ ಕಾರ್ಯಕರ್ತರ ರಾಜ್ಯ ಬಿಜೆಪಿ ಅಧ್ಯಕ್ಷರ ಕಾರನ್ನೇ ಅಲುಗಾಡಿಸಿದ್ದರು. ಇದು ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು.

ಈ ಪ್ರಕರಣವನ್ನು ರಾಜ್ಯ ಸರ್ಕಾರವು NIA ಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದರು. ಹಿಡಿದುಕೊಟ್ಟವರಿಗೆ ಭಾರೀ ಮೊತ್ತದ ಬಹುಮಾನವನ್ನು ಘೋಷಣೆಯನ್ನು ಮಾಡಿತ್ತು.