ಟ್ರೊಲ್ ಗೆ ಹೆದರುವ ಹೆಣ್ಣುಮಗಳು ನಾನಲ್ಲ; ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಪ್ರತಿಭಾ ಕುಳಾಯಿ 

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್ ಗಳಿಗೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ತಿರುಗೇಟು ನೀಡಿದ್ದು, ಟ್ರೋಲ್ ಮಾಡಿ ನನ್ನ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ, ಇದಕ್ಕೆಲ್ಲ ಹೆದರುವ ಹೆಣ್ಣು ಮಗಳು ನಾನಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವರು ಮಂಗಳೂರಿನ ಮಹಾಜನಗಳೇ ನೀವು ನನ್ನ ವಿರುದ್ದ ಮಾಡುತ್ತಿರುವ ಟ್ರೋಲ್ ನನ್ನಲ್ಲಿ ಇನ್ನಷ್ಟು ನಿಮ್ಮ ಪರವಾಗಿ ನಿಲ್ಲಲು ಮತ್ತು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಳ್ಳಲು ಶಕ್ತಿ ಸ್ಪೂರ್ತಿಯನ್ನು ತುಂಬುತ್ತದೆ. ನಿಮ್ಮ ಅಭಿಮಾನಕ್ಕೆ ಚಿರಋಣಿ ಎಂದು ಪೋಸ್ಟ್ ಮಾಡಿದ್ದಾರೆ.

ಅಲ್ಲದೆ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಅವರು, ವಸೂಲಿ ಟೋಲ್ ವಿರೋಧದ ಜನಪರ ಹೋರಾಟವನ್ನು ನಿಮ್ಮ ಟ್ರೋಲ್ ಅಸ್ತ್ರದಿಂದ ನಿಲ್ಲಿಸಲಾಗದು ಎಂದಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ಗೆ ತೆರವಿಗೆ ಒತ್ತಾಯಿಸಿ ನಡೆದ ಮುತ್ತಿಗೆ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕಿ, ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರ ವೀಡಿಯೋ ಒಂದು ಟ್ರೋಲ್ ಆಗುತ್ತಿದ್ದು, ಪೊಲೀಸರು ಪ್ರತಿಭಾ ಕುಳಾಯಿ ಅವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ರಸ್ತೆಯಲ್ಲಿ ಮಲಗಿದ್ದು, ಅರಚುತ್ತಿರುವ ಮೂಲಕ ರೌದ್ರಾವತಾರ ತೋರಿದ್ದರು.

ಪ್ರತಿಭಾ ಅವರ ಈ ವಿಡಿಯೋವನ್ನು ಸಂಕಲನ ಮಾಡಿ ಟ್ರೋಲ್ ಮಾಡಲಾಗುತ್ತಿದ್ದು ಅದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.