ಅಸಭ್ಯ ರೀತಿ ವೀಡೀಯೋ ಎಡಿಟ್ ಮಾಡಿದವರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಪ್ರತಿಭಾ ಕುಳಾಯಿ

ಮಂಗಳೂರು: ಅ.18 ರಂದು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಸಹ್ಯ ಮತ್ತು ಅಸಭ್ಯ ರೀತಿಯಲ್ಲಿ ಚಿತ್ರಿಸಿದ ಭಾವಚಿತ್ರಕ್ಕೆ ಕಮೆಂಟ್ ಮಾಡಿ ಎಂದು ಹರಿಯಬಿಟ್ಟ ಕೆ.ಟಿ ಶೆಟ್ಟಿ ಎಂಬವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಮಂಗಳೂರು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.

ಅ18 ರಂದು ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನಾ ಸಂದರ್ಭದಲ್ಲಿ ಆರಕ್ಷಕ ಅಧಿಕಾರಿಗಳು ತಮ್ಮನ್ನು ಬಂಧಿಸಲು ಬಂದಿದ್ದು, ಆ ಸಂದರ್ಭದಲ್ಲಿ ಬಂಧನದ ವಿರುದ್ದ ಸಾರ್ವಜನಿಕವಾಗಿ ಪ್ರತಿಭಟಿಸಿದ್ದು, ಆಗ ಅಲ್ಲಿದ್ದ ಮಾಧ್ಯಮದವರು ಮತ್ತು ಭಾವಚಿತ್ರಕಾರರು ಪ್ರತಿಭಟನಾಕಾರರ ವೀಡಿಯೋ ಮತ್ತು ಭಾವಚಿತ್ರಗಳನ್ನು ಚಿತ್ರೀಕರಿಸಿದ್ದು, ತಮ್ಮ ಹಲವಾರು ಭಾವಚಿತ್ರಗಳನ್ನು ವಿಕೃತಗೊಳಿಸಿ ಮಾನಹಾನಿಕರವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುತ್ತಾರೆ.

ಸದ್ರಿ ಭಾವಚಿತ್ರಗಳನ್ನು ಹರಿಯಬಿಟ್ಟವರಲ್ಲಿ ಕೆ.ಟಿ.ಶೆಟ್ಟಿ ಅದ್ಯಾರು ಪದವು ಎಂಬವರು ತನ್ನ ಯಾವುದೋ ಚಿತ್ರಕ್ಕೆ ಯಾವುದೋ ರೀತಿಯಲ್ಲಿ ಕಮೆಂಟ್ ಮಾಡಿ ನನ್ನ ಘನತೆಗೆ ಮತ್ತು ವ್ಯಕ್ತಿತ್ವಕ್ಕೆ ತೊಂದರೆ ಮಾಡಿದ್ದು ಮಾತ್ರವಲ್ಲದೆ ವ್ಯಕ್ತಿತ್ವಕ್ಕೆ ಕುಂದು ಬರುವಂತೆ ಮಾಡಿದ್ದಾರೆ ಎಂದು ಆರೋಪಿಸಿರುವ ಪ್ರತಿಭಾ, ತನ್ನ ವ್ಯಕ್ತಿತ್ವಕ್ಕೆ ಕುಂದು ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡುವಂತೆ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.