ಆರ್ಚರಿ ವಿಶ್ವಕಪ್: ನಂಬರ್ 1 ಆಟಗಾರನನ್ನು ಮಣಿಸಿ ಮೊದಲ ವೈಯಕ್ತಿಕ ಚಿನ್ನ ಗೆದ್ದ ಭಾರತೀಯ ಪ್ರಥಮೇಶ್ ಸಮಾಧಾನ್ ಜಾವ್ಕರ್

ಚೀನಾದ ಶಾಂಘೈನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನ 2ನೇ ಹಂತದ ಪಂದ್ಯದಲ್ಲಿ ಭಾರತದ ಪ್ರಥಮೇಶ್ ಸಮಾಧಾನ್ ಜಾವ್ಕರ್ ಅವರು ಶನಿವಾರದಂದು ವಿಶ್ವದ ನಂಬರ್ 1 ಆಟಗಾರ ಮೈಕ್ ಸ್ಕ್ಲೋಸರ್ ಅವರನ್ನು ಸೋಲಿಸಿ ಪುರುಷರ ವೈಯಕ್ತಿಕ ಕಾಂಪೌಂಡ್ ಚಿನ್ನದ ಪದಕವನ್ನು ಗೆದ್ದುಕೊಂಡರು.

19 ವರ್ಷದ ಜಾವ್ಕರ್ ನಿಕಟ ಪೈಪೋಟಿಯ ಫೈನಲ್‌ನಲ್ಲಿ ಡಚ್ ಬಿಲ್ಲುಗಾರನನ್ನು 149-148 ಅಂಕಗಳಿಂದ ಸೋಲಿಸಿದರು.

ವಿಶ್ವ ಶ್ರೇಯಾಂಕದಲ್ಲಿ 54 ನೇ ಸ್ಥಾನ ಹೊಂದಿರುವ, ಪ್ರಥಮೇಶ್ ಜಾವ್ಕರ್, ವಿಶ್ವದ ನಂಬರ್ 1 ಆಟಗಾರ ಸ್ಕೋಲೆಸರ್ ವಿರುದ್ಧದ ಫೈನಲ್‌ನಲ್ಲಿ ತಮ್ಮ ಸಂಪೂರ್ಣ ಶ್ರೇಷ್ಠತೆಯ ಅನಾವರಣವನ್ನು ಮಾಡಿದರು ಮತ್ತು ಭಾರತಕ್ಕೆ ಚಿನ್ನವನ್ನು ಗೆದ್ದು ಕೊಟ್ಟರು. ಪ್ರಥಮೇಶ್ ನ ಈ ಸಾಧನೆಗೆ ದೇಶದ ಘಟಾನುಘಟಿಗಳು ಅವರನ್ನು ಅಭಿನಂದಿಸಿದ್ದಾರೆ.

ಅರ್ಹತಾ ಸುತ್ತಿನಲ್ಲಿ 33ನೇ ಸ್ಥಾನ ಪಡೆದಿದ್ದ ಪ್ರಥಮೇಶ್, ಇದಕ್ಕೂ ಮುನ್ನ ಎರಡನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ದಕ್ಷಿಣ ಕೊರಿಯಾದ ಕಿಮ್ ಜೊಂಘೊ ಅವರನ್ನು ಸೋಲಿಸಿದ್ದರು. ನಂತರ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮಾರ್ಟಿನ್ ಡಾಂಬ್ಸೊ ಅವರನ್ನು ಮೂರನೇ ಸುತ್ತಿನಲ್ಲಿ ಸೋಲಿಸಿದರು.

ಮತ್ತೊಂದೆಡೆ, ಅವ್ನೀತ್ ಕೌರ್ ಮಹಿಳೆಯರ ವೈಯಕ್ತಿಕ ಕಾಂಪೌಂಡ್‌ನಲ್ಲಿ ಟರ್ಕಿಯ ಇಪೆಕ್ ಟೊಮ್ರುಕ್ ವಿರುದ್ಧ 147-144 ಅಂತರದಲ್ಲಿ ಜಯಗಳಿಸಿ ಕಂಚಿನ ಪದಕ ಪಡೆದರು.