ಉಡುಪಿ: ಸಾಮಾಜಿಕ ಕಾರ್ಯಕರ್ತ, ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ ಅವರು ಮತ್ತೆ ಸಂಘ ಕಾರ್ಯಕ್ಕೆ ಮರಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪ್ರಕಾಶ್ ಮಲ್ಪೆ ಅವರು ಕಳೆದ ಮೂರು ವರ್ಷಗಳಿಂದ ಸಂಘದ ಯಾವುದೇ ಜವಾಬ್ದಾರಿ ಹೊಂದಿರಲಿಲ್ಲ. ವೈಯಕ್ತಿಕ ಕಾರಣಗಳಿಂದ ಸಂಘದ ಜವಾಬ್ದಾರಿಗಳಿಂದ ಅಲ್ಪ ಸಮಯದ ವಿರಾಮ ಪಡೆದಿದ್ದರು. ಇದೀಗ ಮತ್ತೆ ಇವರು ಮಂಗಳೂರು ವಿಭಾಗ ಮಟ್ಟದ ಮಹತ್ವದ ಜವಾಬ್ದಾರಿಗೆ ಮರಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರ ಸಭೆಯಲ್ಲಿ ರಾಷ್ಟ್ರೀಯ ಸಹ ಕಾರ್ಯವಾಹರಾದ ಮುಕುಂದ ಜಿ ಅವರ ಸಮ್ಮುಖದಲ್ಲಿ ಈ ಜವಾಬ್ದಾರಿಯನ್ನು ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕಾಶ್ ಮಲ್ಪೆ ಅವರು ಸಂವೇದನಾ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಪರಿಸರ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಜನರಿಗೆ ತಿಳಿಸುವ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಮಂತ್ರಾಲಯದ ವರೆಗೆ ಪಾದಯಾತ್ರೆ ನಡೆಸಿ ಬೀಜದುಂಡೆಗಳನ್ನು ಬಿತ್ತುವ ಅಪರೂಪದ ಅಭಿಯಾನವನ್ನು ನಡೆಸಿದ್ದರು. ಇವರು ಆಯೋಜಿಸಿದ್ದ ವಂದೇಮಾತರಂ ಗಿನ್ನೆಸ್ ರೆಕಾರ್ಡ್ ಕಾರ್ಯಕ್ರಮಗಳು ದೇಶದ ಗಮನ ಸೆಳೆದಿದ್ದವು. ಉತ್ತಮ ವಾಗ್ಮಿಗಳಾಗಿರುವ ಇವರು ತನ್ನ ಸಂಘಟನಾ ಕೌಶಲ್ಯದಿಂದ ಸಂಘಪರಿವಾರ ವಲಯದಲ್ಲಿ ಗುರುತಿಸಲ್ಪಟ್ಟಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಮುಖ ಸ್ಥರದ ಜವಾಬ್ದಾರಿ ಪ್ರಕಾಶ್ ಮಲ್ಪೆ ಅವರಿಗೆ ಲಭಿಸಿದೆ ಎಂಬ ಮಾಹಿತಿ ಇದೆ. ಆದರೆ ಯಾವ ಜವಾಬ್ದಾರಿ ಎನ್ನುವ ಮಾಹಿತಿ ಇನ್ನೂ ಗೌಪ್ಯವಾಗಿದೆ.