ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್: ಯಾವುದೇ ಕ್ಷಣದಲ್ಲಿ ಶರಣಾಗತಿ ಸಾಧ್ಯತೆ

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ತನಿಖೆಯ ನಡುವೆಯೇ ವಿದೇಶಕ್ಕೆ ಪಲಾಯನಗೈದಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೊಲೀಸರಿಗೆ ಶರಣಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

33 ವರ್ಷದ ಪ್ರಜ್ವಲ್ ಭಾಗಿಯಾಗಿದ್ದಾರೆ ಎನ್ನಲಾದ ಸ್ಪಷ್ಟ ವಿಡಿಯೋ ತುಣುಕುಗಳು ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆ ಕುರಿತು ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನಾವು ಕಾನೂನನ್ನು ನಂಬುತ್ತೇವೆ. ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ, ಅವರು ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಅವರ ಸ್ಥಳವನ್ನು ಟ್ರ್ಯಾಕ್ ಮಾಡುತ್ತೇವೆ” ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ತಮ್ಮ ತಂದೆ ಹೆಚ್‌ಡಿ ರೇವಣ್ಣ ಅವರ ಸಲಹೆಯಂತೆ ಕರ್ನಾಟಕ ಪೊಲೀಸರ ವಿಶೇಷ ತನಿಖಾ ತಂಡದ ಮುಂದೆ ಶರಣಾಗುವ ನಿರೀಕ್ಷೆಯಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕರ್ನಾಟಕ ಪೊಲೀಸರು ಪ್ರಕರಣದ ತನಿಖಾ ತಂಡದ ಮುಂದೆ ಪ್ರಜ್ವಲ್ ಶರಣಾಗುವ ನಿರೀಕ್ಷೆಯಲ್ಲಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಅವರನ್ನು ಭಾರತಕ್ಕೆ ಕರೆತರಲು ಇಂಟರ್‌ಪೋಲ್ ನೆರವು ಪಡೆಯಲಾಗುತ್ತಿದೆ ಎಂದು ಕರ್ನಾಟಕ ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದ್ದಾರೆ.