ಜೈಲಿನಲ್ಲಿದ್ರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ: ಮೊಬೈಲ್ ನಲ್ಲಿ ಸಿಕ್ಕಿತು ರಾಶಿ ರಾಶಿ ಅಶ್ಲೀಲ ವಿಡಿಯೋಗಳು! ತನಿಖಾಧಿಕಾರಿಗಳೂ ಶಾಕ್!

ಬೆಂಗಳೂರು: ಜೈಲಿನಲ್ಲಿದ್ದಾಗ ಮೊಬೈಲ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.

ಮೊಬೈಲ್ ಬಳಕೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಎಫ್‌ಎಸ್‌ಎಲ್ (ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ) ವರದಿ ದೊರೆತಿದ್ದು, ಮೊಬೈಲ್ ಹಾಗೂ ಪೆನ್‌ಡ್ರೈವ್‌ನಲ್ಲಿದ್ದ ಡೇಟಾದಿಂದ ಹಲವು ವಿವರಗಳು ಪತ್ತೆಯಾಗಿವೆ ಎನ್ನಲಾಗಿದೆ.

ತನಿಖೆಯ ವೇಳೆ ಪೆನ್‌ಡ್ರೈವ್‌ನಲ್ಲಿ ಒಟ್ಟು 173 ವೀಡಿಯೋ ಫೈಲ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಮೂರು ವೀಡಿಯೋಗಳೂ ಇವೆ ಎಂದು ವರದಿಯಾಗಿದೆ. ನೂರಕ್ಕೂ ಹೆಚ್ಚು ಅಶ್ಲೀಲ ವೀಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಕೆಲವು ಮಹಿಳೆಯರೊಂದಿಗೆ ವೀಡಿಯೋ ಕಾಲ್ ನಡೆಸಿರುವ ಮಾಹಿತಿಯೂ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

ಜೈಲಿನಲ್ಲಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ತಲುಪಿಸಿದ ಆರೋಪದ ಹಿನ್ನೆಲೆಯಲ್ಲಿ ಜೈಲು ವಾರ್ಡನ್‌ನ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮೊಬೈಲ್ ಪಡೆಯಲು ಹಣ ನೀಡಲಾಗಿದೆ ಹಾಗೂ ಸಿಮ್ ಕಾರ್ಡ್‌ಗಾಗಿ ಹಣ ಪಾವತಿಸಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ.

ಈ ಹಿಂದೆ ಸಿಸಿಬಿ ದಾಳಿ ವೇಳೆ ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದು, ಅವುಗಳಲ್ಲಿನ ಡೇಟಾವನ್ನು ಎಫ್‌ಎಸ್‌ಎಲ್ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಸದ್ಯ ಕೆಲವು ವೀಡಿಯೋಗಳನ್ನು ಮಾತ್ರ ಮರುಪಡೆಯಲಾಗಿದ್ದು, ಉಳಿದ ಡೇಟಾವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಎಫ್‌ಎಸ್‌ಎಲ್ ವರದಿಯಲ್ಲಿ ಲಭ್ಯವಾಗಿರುವ ಮಾಹಿತಿ ಆಧರಿಸಿ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ವೀಡಿಯೋ ಕಾಲ್‌ಗಳಿಗೆ ಸಂಬಂಧಿಸಿದ ಮಹಿಳೆಯರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಮೊಬೈಲ್ ಬಳಕೆಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಜೈಲು ಸಿಬ್ಬಂದಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಇತರರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.