ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ ಸಾವಿನ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸಬೇಕು. ಪ್ರಕರಣದ ತನಿಖೆಯಲ್ಲಿ ಹಲವು ಲೋಪಗಳಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡುತ್ತಿರುವ ಹೇಳಿಕೆಗಳ ಬಗ್ಗೆಯೂ ಅನುಮಾನಗಳಿವೆ. ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶವನ್ನು ಹೊರತಂದು ನ್ಯಾಯ ಒದಗಿಸಬೇಕು ಎಂದು ಪ್ರದೀಪ್ ಪೂಜಾರಿ ಅವರ ಸಹೋದರ ದಿಲೀಪ್ ಪೂಜಾರಿ ಒತ್ತಾಯಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರದೀಪ್ ಪೂಜಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಸಮಾಜಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.
ತಮ್ಮ ಸಹೋದರ ಪ್ರದೀಪ್ ಪೂಜಾರಿ ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದರಿಂದ ಆಕೆಯ ದೇಹದ ಮೇಲೆ ಬಾಹ್ಯ ಗಾಯಗಳಾಗಿದ್ದವು ಎಂದು ಎಸ್ಪಿ ಹೇಳಿಕೆ ನೀಡಿದ್ದಾರೆ. ಆದರೆ, ವೈದ್ಯರು ಆಕೆಯ ದೇಹದಲ್ಲಿ ಯಾವುದೇ ಗಾಯಗಳಿಲ್ಲ ಎಂದು ಪ್ರಮಾಣಪತ್ರ ನೀಡಿದ್ದಾರೆ. ಹಾಗಾದರೆ, ಯಾವ ಆಧಾರದ ಮೇಲೆ ಎಸ್ಪಿ ಗಾಯಗಳಾಗಿದ್ದವು ಎಂದು ಹೇಳಿಕೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಪ್ರದೀಪ್ ಪೂಜಾರಿ ಕೊಲೆ ಮಾಡುವ ಉದ್ದೇಶದಿಂದಲೇ ಯುವತಿಯ ಮನೆಗೆ ತೆರಳಿದ್ದ ಎಂದು ಎಸ್ಪಿ ತಿಳಿಸಿದ್ದಾರೆ. ಆದರೆ, ಯುವತಿಯ ಮನೆಯವರು ಬಿಡುಗಡೆ ಮಾಡಿರುವ ಆಡಿಯೊದಲ್ಲಿ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಲು ಮನೆಗೆ ಬಂದಿರುವುದಾಗಿ ಪ್ರದೀಪ್ ಹೇಳಿರುವುದು ದಾಖಲಾಗಿದೆ. ಇಂತಹ ವ್ಯತಿರಿಕ್ತ ಹೇಳಿಕೆಗಳ ನಡುವೆ ಜನರು ಯಾರ ಮಾತನ್ನು ನಂಬಬೇಕು ಎಂಬ ಪ್ರಶ್ನೆ ಎದುರಾಗಿದೆ.
ಪೊಲೀಸರು ಪ್ರಕರಣದ ನೈಜಾಂಶವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಪ್ರಕರಣ ನಡೆದು ಎಂಟು ದಿನಗಳು ಕಳೆದಿದ್ದರೂ ನೈಜ ಆರೋಪಿಗಳ ಬಂಧನವಾಗಿಲ್ಲ. ಹಿರಿಯಡ್ಕ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ಅಮಾನತುಗೊಳಿಸಿಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ನ್ಯಾಯ ದೊರೆಯುವ ವಿಶ್ವಾಸ ತಮಗಿಲ್ಲ. ಆದ್ದರಿಂದ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸಿ, ಸಮಗ್ರ ತನಿಖೆ ನಡೆಸಬೇಕು ಎಂದು ದಿಲೀಪ್ ಪೂಜಾರಿ ಒತ್ತಾಯಿಸಿದರು.















