ಮಾ.27ರಂದು ಪವರ್‌ ಸಂಸ್ಥೆಯಿಂದ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್‌ ಸಬಲೀಕರಣ ಕಾರ್ಯಕ್ರಮ

ಉಡುಪಿ: ಯುಬಿಯುಎನ್ ಟಿಯು ಕನ್ಸೋರ್ಟಿಯಂ ಹಾಗೂ ಉಡುಪಿಯ ಪವರ್‌ ಸಂಸ್ಥೆಯ ವತಿಯಿಂದ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್‌ ಸಬಲೀಕರಣ ಕಾರ್ಯಕ್ರಮ ಇದೇ 27ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಮಣಿಪಾಲದ ಈಶ್ವರ ನಗರದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ ಕಾಲೇಜಿನ ಆವರಣದ ಮಣಿಪಾಲ ಕೌಶಲಾಭಿವೃದ್ಧೀ ಕೇಂದ್ರದಲ್ಲಿ ನಡೆಯಲಿದೆ ಎಂದು ಪವರ್‌ ಸಂಸ್ಥೆಯ ಸಂಸ್ಥಾಪಕಿ ರೇಣು ಜಯರಾಮ್‌ ಮತ್ತು ಅಧ್ಯಕ್ಷೆ ವೀಣಾ ಕುಡ್ವಾ ತಿಳಿಸಿದರು.
ಈ‌ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಹಿಳೆಯರು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಅಗತ್ಯವಾದ ಕೌಶಲಗಳನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಬ್ರ್ಯಾಂಡ್‌ ನಿರ್ಮಾಣ, ವಿಷಯ ರಚನೆ, ಗ್ರಾಹಕರೊಂದಿಗೆ ಸಂವಹನ ಹಾಗೂ ಡಿಜಿಟಲ್‌ ಮಾರ್ಕೆಟಿಂಗ್‌ ತಂತ್ರಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರವನ್ನು ಡಿಜಿಟಲ್‌ ವೇದಿಕೆಯಲ್ಲಿ ಬಲಪಡಿಸಿ, ಹೊಸ ಗ್ರಾಹಕರನ್ನು ಆಕರ್ಷಿಸಿ, ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಭಾಗವಹಿಸುವವರಿಗೆ ಪ್ರಮಾಣ ಪತ್ರ, ಊಟ, ಉಪಹಾರ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಜಯಾ ಶೆಟ್ಟಿ, ಪ್ರತಿಭಾ ರವಿ, ಶಾಲಿನಿ ಬಂಗೇರ, ರೇಣು ಜಯರಾಮ್‌, ನೀತಾ ಶೆಟ್ಟಿ ಉಪಸ್ಥಿತರಿದ್ದರು.