ತೆಲುಗಿನ ಜನಪ್ರಿಯ ಕ್ರಾಂತಿಕಾರಿ ಗಾಯಕ ಗುಮ್ಮಡಿ ವಿಠ್ಠಲ್ ರಾವ್​ ಆಲಿಯಾಸ್ ಗದ್ದರ್​ ನಿಧನ

ಹೈದರಾಬಾದ್​ (ತೆಲಂಗಾಣ): ಹೃದಯ ಸಂಬಂಧಿ ಖಾಯಿಲೆಗೆ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ವಿಮಲಾ ಹಾಗು ಮಕ್ಕಳಾದ ಸೂರ್ಯ, ಚಂದ್ರ ಹಾಗೂ ವೆನ್ನೆಲ ಅವರನ್ನು ಅಗಲಿದ್ದಾರೆ.
ತೆಲುಗಿನ ಕ್ರಾಂತಿಕಾರಿ ಗಾಯಕರೆಂದೇ ಪ್ರಸಿದ್ಧಿ ಪಡೆದಿದ್ದ ಗದ್ದರ್ (74) ಇಂದು​ ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತೆಲುಗಿನ ಕ್ರಾಂತಿಕಾರಿ ಗಾಯಕ ಗುಮ್ಮಡಿ ವಿಠ್ಠಲ್ ರಾವ್​ ಆಲಿಯಾಸ್ ಗದ್ದರ್ ಅವರು​ ಹೈದರಾಬಾದ್​ನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ

‘ಗದ್ದರ್​’ ಆಲ್ಬಂ: 1969ರ ತೆಲಂಗಾಣ ಚಳವಳಿಯಲ್ಲಿ ಸಕ್ರಿಯರಾಗಿದ್ದ ಗದ್ದರ್​​, ಪ್ರತ್ಯೇಕ ತೆಲಂಗಾಣ ರಾಜ್ಯ ಏಕೆ ಬೇಕು? ಎಂಬ ಕುರಿತು ಗ್ರಾಮ-ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡಿದ್ದರು. ಬುರ್ರ ಕಥೆಗಳ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. 1971ರಲ್ಲಿ ನಿರ್ದೇಶಕ ಬಿ. ನರಸಿಂಗ ರಾವ್​ ಪ್ರೋತ್ಸಾಹದಿಂದ ಚಿತ್ರರಂಗಕ್ಕೆ ಬಂದಿದ್ದರು. ಚಲನಚಿತ್ರಗಳಲ್ಲಿ ಹಾಡುಗಳನ್ನು ಹಾಡಲು ಆರಂಭಿಸಿದ್ದರು. ಮೊದಲ ಆಲ್ಬಂ ‘ಗದ್ದರ್​’ ಎಂಬ ಹೆಸರಲ್ಲಿ ಹೊರಬಂದಿತ್ತು. ಅಂದಿನಿಂದ ಅದೇ ಹೆಸರೇ ಕಾಯಂ ಆಗಿತ್ತು.

1984ರಲ್ಲಿ ಬ್ಯಾಂಕ್​ ಉದ್ಯೋಗಕ್ಕೆ ರಾಜೀನಾಮೆ ನೀಡಿ ಪ್ರಜಾ ಗಾಯಕರಾಗಿ ತಮ್ಮ ಜೀವನವನ್ನು ಮುನ್ನಡೆಸಿದ್ದರು. ದಲಿತರ, ಬಡವರ ಕಷ್ಟಗಳನ್ನು ಹಾಡುಗಳು ಮತ್ತು ನಾಟಕಗಳ ರೂಪದಲ್ಲಿ ಕಟ್ಟಿ ತಿಳಿಸುವ ಪ್ರಯತ್ನ ಮಾಡುತ್ತಿದ್ದರು. 1997ರ ಏಪ್ರಿಲ್​ 6ರಂದು ಗದ್ದರ್​ ಮೇಲೆ ಹತ್ಯೆ ಪ್ರಯತ್ನ ನಡೆದಿತ್ತು. ಅನೇಕ ಗುಂಡುಗಳು ದೇಹ ಹೊಕ್ಕಿದ್ದವು. ಎಲ್ಲ ಗುಂಡುಗಳನ್ನೂ ಹೊರತೆಗೆದ ಮೇಲೂ ಒಂದು ಗುಂಡನ್ನು ದೇಹದಲ್ಲಿ ಉಳಿಸಲಾಗಿತ್ತು. ಆ ಗುಂಡು ತೆಗೆದರೆ ಪ್ರಾಣಕ್ಕೆ ಅಪಾಯ ಎಂದು ವೈದ್ಯರು ಎಚ್ಚರಿಸಿದ್ದರು.

2005ರಲ್ಲಿ ಚಿಕ್ಕಮಗಳೂರಿನಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್‌ನನ್ನು ಪೊಲೀಸರು ಎನ್​ಕೌಂಟರ್‌ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ 2005ರ ಫೆ.10ರಂದು ಸರ್ಕಾರಿ ಶಾಲೆಯಲ್ಲಿ ತಂಗಿದ್ದ 7 ಜನ ಕೆಎಸ್‌ಆರ್​ಪಿ ಪೊಲೀಸರು ಹಾಗೂ ಒಬ್ಬ ನಾಗರಿಕನನ್ನು ನಕ್ಸಲರು ನಾಡಬಾಂಬ್​ ಮತ್ತು ಗ್ರೆನೇಡ್‌ ದಾಳಿ ಮೂಲಕ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಒಟ್ಟು 90 ಜನರ ಹೆಸರು ಕೇಳಿ ಬಂದಿತ್ತು. 2ನೇ ಆರೋಪ ಪಟ್ಟಿಯಲ್ಲಿ 12ನೇ ಆರೋಪಿಯಾಗಿ ಗದ್ದರ್ ಹೆಸರನ್ನು ಉಲ್ಲೇಖಿಸಲಾಗಿತ್ತು.

ರಾಹುಲ್ ಗಾಂಧಿ ಸಂತಾಪ: ತೆಲಂಗಾಣದ ಪ್ರಸಿದ್ಧ ಕವಿ, ಪ್ರಖರ ಕಾರ್ಯಕರ್ತರಾದ ಶ್ರೀ ಗುಮ್ಮಡಿ ವಿಠ್ಠಲ ರಾವ್‌ ಅವರು ನಿಧನ ಹೊಂದಿದ ವಿಚಾರ ತಿಳಿದು ದು:ಖವಾಯಿತು. ತೆಲಂಗಾಣ ಜನರ ಮೇಲಿರುವ ಅವರ ಪ್ರೀತಿಯೇ ಅವರನ್ನು ದೀನ ದಲಿತರ ಹೋರಾಟಕ್ಕೆ ಸೆಳೆಯಿತು. ಅವರ ಪರಂಪರೆ ನಮಗೆಲ್ಲ ಪ್ರೇರಣೆ ನೀಡಲಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಟ್ವೀಟ್ ಮಾಡಿದ್ದಾರೆ. ರಾಹುಲ್ ಪೋಸ್ಟ್‌ ಮಾಡಿರುವ ಚಿತ್ರದಲ್ಲಿ ಗುಮ್ಮಡಿ ವಿಠ್ಠಲ ರಾವ್‌ ಮತ್ತು ರಾಹುಲ್ ಗಾಂಧಿ ಪರಸ್ಪರ ಆಲಿಂಗಿಸಿಕೊಂಡಿರುವುದನ್ನು ನೋಡಬಹುದು

ವೆಂಕಟಮ್ಮನಹಳ್ಳಿ ಹತ್ಯಾಕಾಂಡ: ತೆಲುಗು ರಾಜ್ಯಗಳ ತೆಲಂಗಾಣ ಹಾಗೂ ಆಂಧ್ರಪ್ರದೇಶ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲೂ ಗದ್ದರ್ ಹೆಸರು ಹೊಂದಿದ್ದರು. ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ ಮತ್ತು ಬಿಹಾರದಲ್ಲೂ ತಮ್ಮ ಗಾಯನ ಪ್ರದರ್ಶನ ನೀಡಿದ್ದರು. ಕರ್ನಾಟಕದ ತುಮಕೂರಿನ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಹತ್ಯಾಕಾಂಡ ಪ್ರಕರಣದಲ್ಲೂ ಗದ್ದರ್​ ಹೆಸರು ಕೇಳಿ ಬಂದಿತ್ತು.
‘ಜನರ ಸಮರ ನೌಕೆ’ ಎಂದೇ ಖ್ಯಾತಿ ಪಡೆದಿದ್ದ ಗದ್ದರ್​ ಮೂಲ ಹೆಸರು ಗುಮ್ಮಡಿ ವಿಠ್ಠಲ್ ರಾವ್​. 1949ರಲ್ಲಿ ವೇದಕ್​ ಜಿಲ್ಲೆಯ ತುಪ್ರಾನ್​ ಗ್ರಾಮದಲ್ಲಿ ಶೇಷಯ್ಯ ಮತ್ತು ಲಚ್ಚಮ್ಮ ದಂಪತಿಗೆ ಮಗನಾಗಿ ಜನಿಸಿದ್ದರು. ನಿಜಾಮಾಬಾದ್​ ಮತ್ತು ಮಹೆಬೂಬ್​ನಗರ ಜಿಲ್ಲೆಗಳಲ್ಲಿ ಓದು ಮುಗಿಸಿ, ಹೈದರಾಬಾದ್​ನಲ್ಲಿ ಇಂಜಿನಿಯರಿಂಗ್​ ಪದವಿ ಪೂರೈಸಿದ್ದರು.
ಸಂಸದ ರೇವಂತ್​ ರೆಡ್ಡಿ ಸೇರಿ ಹಲವರು ಆಸ್ಪತ್ರೆಗೆ ಭೇಟಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. “ಗದ್ದರ್ ಅವರಿಗೆ​ ಹೃದ್ರೋಗ ಶಸ್ತ್ರಚಿಕಿತ್ಸೆಯ ಬಳಿಕ ಸೋಂಕು ಹೆಚ್ಚಾಗಿತ್ತು. ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು” ಎಂದು ವೈದ್ಯರು ತಿಳಿಸಿದರು.