ಉಡುಪಿ: ಪಾಲಿಟೆಕ್ನಿಕ್ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಖಚಿತವಾಗಿ ಉದ್ಯೋಗ ಪಡೆಯಬಹುದಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಸೇರ್ಪಡೆಗೊಂಡು ಅದರ ಪ್ರಯೋಜನ ಪಡೆಯಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ ಐಟಿ&ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದರು.
ಅವರು ಬೆಳಪುನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 21 ನೇ ಶತಮಾನದ ಅವಶ್ಯಕತೆಗಳಿಗೆ ಅನುಗುಣವಾಗಿ ಕೋರ್ಸ್ ಗಳನ್ನು ಅಳವಡಿಸಿಕೊಂಡಿದ್ದು ,ಈ ಕೋರ್ಸ್ ಗಳನ್ನು ಅಳವಡಿಸಿಕೊಳ್ಳುವ ಮೊದಲು ವಿವಿಧ ಪ್ರಸಿದ್ದ ಕೈಗಾರಿಕೆಗಳ ಮುಖ್ಯಸ್ಥರು ಮತ್ತು ಕೈಗಾರಿಕಾ ತಂತ್ರಜ್ಞರೊಂದಿಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ಬಳಕೆಗೆ ಅಗತ್ಯವಿರುವ ಕೋರ್ಸ್ ಗಳನ್ನು ಮಾರ್ಪಡಿಸಿ ಮರು ಸಿದ್ದಪಡಿಸಿದ್ದು, ದೇಶದಲ್ಲಿ ಈ ರೀತಿ ಇಡೀ ಪಠ್ಯವನ್ನು ಮಾರ್ಪಡಿಸಿದ ಮೊದಲ ರಾಜ್ಯ ಕರ್ನಾಟಕ ವಾಗಿದೆ ಎಂದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಮಲ್ಟಿ ಎಂಟ್ರಿ- ಮಲ್ಟಿ ಎಕ್ಸಿಟ್ ಮಾದರಿಯಲ್ಲಿ ಪಾಲಿಟೆಕ್ನಿಕ್ ಶಿಕ್ಷಣವನ್ನು ಸಿದ್ದಪಡಿಸಿದ್ದು,ಒಂದು ವರ್ಷ, 2 ವರ್ಷ ಮತ್ತು 3 ವರ್ಷ ಅಭ್ಯಾಸ ಮಾಡುವವರಿಗೆ ಅಗತ್ಯವಿರುವ ಶಿಕ್ಷಣವನ್ನು ರೂಪಿಸಿದ್ದು,ಇದು ಅಂತಾರಾಜ್ಯ ಮತ್ತು ದೇಶದ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಿದೆ ಎಂದರು.
ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಲಿಕೆಯಲ್ಲಿ ಗುಣಮಟ್ಟ ಹೆಚ್ಚಿಸಲು , ಕಾಂಪ್ರೆöÊನ್‌ಸಿವ್ ಲರ್ನಿಂಗ್ ಮ್ಯಾನೇಜ್ ಮೆಂಟ್ ಸಿಸ್ಟಂ, ಎಲ್ಲಾ ಕ್ಸಾಸ್ ರೂಮ್ ಗಳಿಗೆ ಇಂಟರ್ನೆಟ್ ಎನೇಬಲ್ ಸ್ಮಾಟ್ ಕ್ಲಾಸ್ ಹಾಗೂ ವಿದ್ಯಾರ್ಥಿಗಳಿಗೆ ಟ್ಯಾಬ್ ನ ನೀಡುವ ಮೂಲಕ , ಕಲಿಕೆಯಲ್ಲಿ ಸಂಪೂರ್ಣ ಡಿಜಿಟಲೈಸೇಶನ್ ಮಾಡಲಾಗುವುದು ಎಂದರು.
ಬೆಳಪು ನಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಜ್ಞಾನ ಕೇಂದ್ರವನ್ನು 2022 ರ ಮಾರ್ಚ್ ನಲ್ಲಿ ಉದ್ಘಾಟಿಸಲಾಗುವುದು ಹಾಗೂ ಇಲ್ಲಿ ಸ್ನಾತಕೋತ್ತರ ವಿಜ್ಞಾನ ಕೇಂದ್ರ ಕೂಡಾ ಪ್ರಾರಂಭವಾಗಲಿದೆ ಎಂದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಬಹು ಬೇಡಿಕೆ ಇರುವ ಕೋರ್ಸ್ಗಳಿಗೆ ಮಾತ್ರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಅಂತಹ ಕೋರ್ಸ್ ಗಳನ್ನೇ ಕಾಪು ಪಾಲಿಟೆಕ್ನಿಕ್ ನಲ್ಲಿ ಆರಂಭಿಸಲಾಗಿದೆ. ನೂತನ ಶಿಕ್ಷಣ ನೀತಿಯಂತೆ ಆಯಾ ಭಾಗಗಳಿಗೆ ಅಗತ್ಯವಿರುವ ಶಿಕ್ಷಣವನ್ನು ನೀಡಲು ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ ಎಂದರು.
ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಪಾಲಿಟೆಕ್ನಿಕ್ ಕಾಲೇಜಿಗೆ ಅಗತ್ಯವಿರುವಿನ್ನಿತರ ಮೂಲಭೂತ ಸೌಕರ್ಯಗಳು ಹಾಗೂ ರಸ್ತೆ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಒದಗಿಸಲಾಗುವುದು. ಬೆಳಪು ನಲ್ಲಿ ವಿಜ್ಞಾನ ಕೇಂದ್ರ ಕೂಡಾ ಶೀಘ್ರದಲ್ಲಿ ಆರಂಭಗೊಳ್ಳಿದ್ದು, ಬೆಳಪು ಶಿಕ್ಷಣ ಕ್ಷೇತ್ರದ ಸಮೂಹ ಕೇಂದ್ರವಾಗಲಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನಗಳನ್ನು ಪಡೆಯಬೇಕು ಎಂದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಬಿ ಭಟ್,ನಿವೃತ್ತ ಪ್ರಾಂಶುಪಾಲ ಗಣಪತಿ ಮತ್ತಿತರರು ಉಪಸ್ಥಿತರಿದ್ದರು.
ಕಾಪು ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಸುನಿಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು, ಪಾಲಿಟೆಕ್ನಿಕ್ ನ ವಿಶೇಷಾಧಿಕಾರಿ ಮಂಜುನಾಥ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.