ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ವರ್ಷದ ಚುನಾವಣೆಯಲ್ಲಿ 9.17 ಲಕ್ಷಕ್ಕೂ ಹೆಚ್ಚು ಮೊದಲ ಬಾರಿಯ ಮತದಾರರು ಮತ ಚಲಾಯಿಸಲಿದ್ದಾರೆ. ಹಾಲಿ ವಿಧಾನಸಭೆಯ ಅವಧಿ ಮೇ 24ಕ್ಕೆ ಮುಕ್ತಾಯವಾಗಲಿದೆ. ಒಟ್ಟು 5.21 ಕೋಟಿ ಜನರು ಮತದಾನದ ಹಕ್ಕು ಹೊಂದಿದ್ದಾರೆ. 224 ಎಸಿಗಳಲ್ಲಿ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಪಿಎಸ್‌ಗೆ ಸರಾಸರಿ 883 ಮತದಾರರು ಇರಲಿದ್ದಾರೆ. 50% ಮತದಾನ ಕೇಂದ್ರಗಳು ವೆಬ್‌ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿವೆ. 1320 ಮತಗಟ್ಟೆಗಳನ್ನು ಮಹಿಳಾ ಅಧಿಕಾರಿಗಳು ನಿರ್ವಹಿಸಲಿದ್ದಾರೆ.
224 ವಿಧಾನಸಭಾ ಕ್ಷೇತ್ರಗಳ ಪೈಕಿ 36 ಎಸ್‌ಸಿ ಮತ್ತು 15 ಎಸ್‌ಟಿಗೆ ಮೀಸಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು. 80 ವರ್ಷ ಮೀರಿದ 12.15 ಲಕ್ಷ ಮತ್ತು 5.55 ಲಕ್ಷ ಅಂಗವಿಕಲ ಮತದಾರರಿಗೆ ಮೊದಲ ಬಾರಿಗೆ ಮನೆ ಮತದಾನದ ಸೌಲಭ್ಯವನ್ನು ನೀಡಲಾಗಿದೆ.












