ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ನ 82 ಶಾಸಕರ ರಾಜೀನಾಮೆಯಿಂದ ಅಧ್ಯಕ್ಷರಿಗೆ ಇಕ್ಕಟ್ಟು

ಜೈಪುರ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನಿಷ್ಠರಾಗಿರುವ 82 ಶಾಸಕರು ಭಾನುವಾರ ರಾತ್ರಿ ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿದ ನಂತರ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಸ್ಫೋಟಗೊಂಡಿದೆ. ಜುಲೈ 2020 ರಲ್ಲಿ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯವೆದ್ದವರಿಂದ ಹೊಸ ರಾಜಸ್ಥಾನ ಮುಖ್ಯಮಂತ್ರಿ ನೇಮಕವನ್ನು ಇತರ ಶಾಸಕರು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಅಶೋಕ್ ಗೆಹ್ಲೋಟ್ ಗೆದ್ದರೆ ಸಚಿನ್ ಪೈಲಟ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಊಹಾಪೋಹದ ನಂತರ ಈ ಬೆಳವಣಿಗೆ ಕಂಡುಬಂದಿದೆ. ಏತನ್ಮಧ್ಯೆ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಕ್ಕಟ್ಟು ಪರಿಹರಿಸಲು ಶಾಸಕರೊಂದಿಗೆ ಏಕಕಾಲದಲ್ಲಿ ಮಾತುಕತೆ ನಡೆಸುವಂತೆ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರಿಗೆ ಸೂಚಿಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ವೇಣುಗೋಪಾಲ್ ಅವರನ್ನು ಕೇರಳದಿಂದ ದೆಹಲಿಗೆ ಕಳುಹಿಸಿದ ರಾಹುಲ್ ಗಾಂಧಿ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿ ಮಾತುಕತೆ ನಡೆಸಲು ತಿಳಿಸಿದ್ದಾರೆ. ಗೆಹ್ಲೋಟ್ ಮತ್ತು ಪಾಯ್ಲೆಟ್ ತಂಡದ ಮಧ್ಯೆ ಮಧ್ಯಸ್ಥಿಕೆ ನಡೆಸಲು ಕಮಲನಾಥ್ ಅವರನ್ನು ಮುಂದಿಡಲಾಗಿದೆ.

ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ, ಇದು ಪಕ್ಷದೊಳಗಿನ ವಿಷಯವಾಗಿರುವುದರಿಂದ ಕಾಂಗ್ರೆಸ್ ಪರಿಹಾರ ಕಂಡುಕೊಳ್ಳುತ್ತದೆ ಇದರ ತನ್ನ ಪಾತ್ರವಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಗೆಹ್ಲೋಟ್ ಅವರ ರಾಜೀನಾಮೆಯನ್ನುಅಂಗೀಕರಿಸುವ ಪ್ರಶ್ನೆಗೆ ಅದು ಸಂಭವಿಸಿದಾಗ ಅದನ್ನು ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ರಾಹುಲ್ ಗಾಂಧಿ ಪ್ರಸ್ತುತ ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿದ್ದರೆ ಇತ್ತ ಅವರ ಪಕ್ಷದ ಶಾಸಕರು ಕಾಂಗ್ರೆಸ್ ತೋಡೋ ಗುಂಗಿನಲ್ಲಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.