ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನ: ನದಿಗೆ ಹಾರಿ ಸಾವು

ಮಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹಲ್ಲೆ ಆರೋಪಿ ನದಿಗೆ ಜಿಗಿದು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪತ್ನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ವ್ಯಕ್ತಿಯೊಬ್ಬ ಪೊಲೀಸರು ವಶಕ್ಕೆ ಪಡೆದು ಕರೆತರುತ್ತಿದ್ದಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ಭಾನುವಾರ ರಾತ್ರಿ ಕೂಳೂರು ಸೇತುವೆಯಿಂದ ಫಲ್ಗುಣಿ ನದಿಗೆ ಜಿಗಿದಿದ್ದು, ಮುಳುಗಿ ಮೃತಪಟ್ಟಿದ್ದಾನೆ.
ಕುದ್ರೋಳಿ ನಿವಾಸಿ ಮುನೀರ್‌, ಮೃತ ವ್ಯಕ್ತಿ. ಕೂಳೂರು ಸೇತುವೆಯಿಂದ ಜಿಗಿದಿದ್ದ ಆರೋಪಿಯ ಮೃತದೇಹ ಬೆಂಗರೆ ಸಮೀಪ ನಿನ್ನೆ ಪತ್ತೆಯಾಗಿದೆ.
ಮುನೀರ್ ಭಾನುವಾರ ಸಂಜೆ ತನ್ನ ಪತ್ನಿಗೆ ಹಲ್ಲೆ ನಡೆಸಿ ಬಳಿಕ ಬಟ್ಟೆಬರೆಗಳೊಂದಿಗೆ ಆಟೋರಿಕ್ಷಾದಲ್ಲಿ ಪರಾರಿಯಾಗುತ್ತಿದ್ದ. ಹಿಂದೆಯೂ ಹಲವು ಬಾರಿ ಪತ್ನಿಗೆ ಹಲ್ಲೆ ನಡೆಸಿದ್ದ ಆರೋಪಿ, ದೀರ್ಘ ಕಾಲ ಕುಟುಂಬದಿಂದ ದೂರವಿದ್ದ. ಇದೇ ಕಾರಣಕ್ಕೆ ಹಲ್ಲೆಗೊಳಗಾದ ಮಹಿಳೆಯ ಅಕ್ಕನ ಗಂಡ ಮುಹಮ್ಮದ್ ಅವರು ಮುನೀರ್ ವಿರುದ್ಧ ಮಂಗಳೂರು ಉತ್ತರ ಬಂದರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಎಲ್ಲ ಠಾಣೆಗಳಿಗೂ ಮಾಹಿತಿ ರವಾನಿಸಿದ್ದರು. ಆರೋಪಿಯು ಹಳೆಯಂಗಡಿ ಸಮೀಪ ಹೋಗುತ್ತಿದ್ದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.
ಆಟೊದಲ್ಲಿ ಮಂಗಳೂರಿನ ಬಂದರು ಠಾಣೆಗೆ ಕರೆತರಲಾಗುತ್ತಿತ್ತು. ಆತನೊಂದಿಗೆ ಒಬ್ಬ ಕಾನ್‌ಸ್ಟೆಬಲ್‌ ಇದ್ದರು. ರಾತ್ರಿ 12.30ರ ಸುಮಾರಿಗೆ ಕೂಳೂರು ಸೇತುವೆ ಬಳಿ ಬಂದಾಗ ಮೂತ್ರ ವಿಸರ್ಜನೆಯ ನೆಪದಲ್ಲಿ ಮುನೀರ್‌ ಆಟೊದಿಂದ ಕೆಳಕ್ಕೆ ಇಳಿದಿದ್ದ. ಕ್ಷಣಮಾತ್ರದಲ್ಲಿ ಸೇತುವೆಯಿಂದ ನದಿಗೆ ಧುಮುಕಿದ್ದ. ಆ ಬಳಿಕ ಆತ ಪತ್ತೆಯಾಗಿರಲಿಲ್ಲ. ಸೋಮವಾರ ಸಂಜೆ ಬೆಂಗರೆ ಬಳಿ ಮೃತದೇಹ ಪತ್ತೆಯಾಗಿದೆ.
ಪಣಂಬೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ನಿನ್ನೆ ಸಂಜೆ ಸ್ಥಳ ಮಹಜರು ನಡೆಸಿ ಮೃತದೇಹವನ್ನು ಸ್ಥಳಾಂತರಿಸಿದ್ದಾರೆ.