ಸುರತ್ಕಲ್ ಹತ್ಯೆ ಪ್ರಕರಣ: ವಿಚಾರಣೆಗಾಗಿ 5 ಮಂದಿಯನ್ನು ವಶಕ್ಕೆ ಪಡೆದ ನಗರ ಪೊಲೀಸರು

ಸುರತ್ಕಲ್: ಇಲ್ಲಿನ ಕೃಷ್ಣಾಪುರ-ಕಾಟಿಪಳ್ಳದಲ್ಲಿ ಜಲೀಲ್ ಎನ್ನುವ ವ್ಯಕ್ತಿಯನ್ನು ಅವರ ಅಂಗಡಿಯಯಲ್ಲೇ ಚೂರಿ ಇರಿದು ಹತ್ಯೆ ಮಾಡಲಾದ ಪ್ರಕರಾಣದಲ್ಲಿ ತನಿಖೆ ಚುರುಕುಗೊಂಡಿದೆ.

ಸುರತ್ಕಲ್ ಸಮೀಪದ ಕಾಟಿಪಳ್ಳ 4ನೇ ಬ್ಲಾಕ್‌ನಲ್ಲಿರುವ ಫ್ಯಾನ್ಸಿ ಸ್ಟೋರ್ ಮಾಲೀಕ ಅಬ್ದುಲ್ ಜಲೀಲ್ (45) ಅವರ ಅಂಗಡಿ ಬಳಿ ಶನಿವಾರ ರಾತ್ರಿ ನಡೆದ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಗರ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ನಾವು ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರನ್ನು ವಿಚಾರಣೆಗಾಗಿ ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ. ಕೊಲೆಯ ಹಿಂದಿನ ಕಾರಣವನ್ನು ನಾವು ಶೀಘ್ರದಲ್ಲೇ ಬಹಿರಂಗಪಡಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಘಟನೆ ನಡೆದ ಕೂಡಲೇ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪೊಲೀಸರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರವಷ್ಟೇ ಕೊಲೆಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸಬಹುದು. ಹಣ ವಿವಾದ ಮತ್ತು ಮಹಿಳೆಯರೊಂದಿಗಿನ ಸಂಬಂಧದ ಊಹಾಪೋಹಗಳು ಕೊಲೆಗೆ ಕಾರಣವಾಗಿರುವ ಬಗ್ಗೆ ನಾನು ಏನನ್ನೂ ಹೇಳಲಾರೆ ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ 12 ತುಕಡಿಗಳು ಮತ್ತು ನಗರ ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ಸಹ ನಿಯೋಜಿಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.