ಮಾದಕ ವಸ್ತು ಜಾಲದ ಮೇಲೆ ಪೊಲೀಸ್ ದಾಳಿ: 10 ಮಂದಿ ಬಂಧನ

ಉಡುಪಿ: ಶಿರ್ವ ಹಾಗೂ ಉಡುಪಿ ನಗರ ಪೊಲೀಸರು ಪ್ರತ್ಯೇಕವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತುಗಳ ಸಾಗಾಟ ಮತ್ತು ದಾಸ್ತಾನು ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು 10 ಮಂದಿಯನ್ನು ಬಂಧಿಸಿದ್ದು, ಗಾಂಜಾ, ಮೆಥಾಪಿಟಾಮೈನ್, ವಾಹನಗಳು, ಮೊಬೈಲ್‌ಗಳು ಹಾಗೂ ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆ.22ರಂದು ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಬಳಿ ಎರಡು ಕಾರು ಹಾಗೂ ಸ್ಕೂಟರ್‌ನಲ್ಲಿ ಮಾದಕ ವಸ್ತುಗಳನ್ನು ಹೊಂದಿರುವುದಾಗಿ ದೊರೆತ ಮಾಹಿತಿಯ ಆಧಾರದಲ್ಲಿ ಶಿರ್ವ ಪೊಲೀಸರು ದಾಳಿ ನಡೆಸಿದರು.

ಈ ವೇಳೆ ಅಲ್ನಾಜ್, ಅನಾಸ್, ಅಲ್ತಾಫ್, ಸ್ಟ್ಯಾನಿ ಸಂದೀಪ್, ಶಾಕೀಬ್, ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್ ಹಾಗೂ ಸಂತೋಷ್ ದೇವಾಡಿಗ ಎಂಬವರನ್ನು ಬಂಧಿಸಲಾಯಿತು.

ಆರೋಪಿಗಳಿಂದ ₹67,714 ಮೌಲ್ಯದ 1,354.28 ಗ್ರಾಂ ಗಾಂಜಾ, ₹1,30,960 ಮೌಲ್ಯದ 32.74 ಗ್ರಾಂ ಮೆಥಾಪಿಟಾಮೈನ್, ಕೃತ್ಯಕ್ಕೆ ಬಳಸಿದ ಎರಡು ಕಾರು, ಒಂದು ಸ್ಕೂಟರ್, 9 ಮೊಬೈಲ್‌ಗಳು, ಎರಡು ತೂಕದ ಯಂತ್ರಗಳು ಹಾಗೂ ₹75,010 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ ಠಾಣೆಯ ಎಸ್ಸೈ ಅನಿಲ್ ಅವರು ತನಿಖೆ ಮುಂದುವರಿಸಿದಾಗ, ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ. ಆರೋಪಿಗಳು ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ಹೊಂದಿದ್ದು, ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಗಾಂಜಾ ವಶ

ಉಡುಪಿ ನಗರ ಪೊಲೀಸ್ ಠಾಣೆಯ ಎಸ್ಸೈ ಭರತೇಶ್ ಕಂಕಣವಾಡಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸೆ.23ರಂದು ರಾತ್ರಿ 12.30ರ ಸುಮಾರಿಗೆ ವಾದಿರಾಜ ರಸ್ತೆಯ ಮನೆಯೊಂದಕ್ಕೆ ದಾಳಿ ನಡೆಸಲಾಯಿತು. ಗಾಂಜಾ ದಾಸ್ತಾನು ಇರಿಸಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶ್ರೀವತ್ಸ ಕೆ.ಜಿ. ಎಂಬಾತನನ್ನು ಬಂಧಿಸಲಾಯಿತು.ಆತನಿಂದ ₹83,000 ಮೌಲ್ಯದ 1 ಕೆ.ಜಿ. 659.91 ಗ್ರಾಂ ಗಾಂಜಾ, ₹1,26,500 ನಗದು, ಡಿಜಿಟಲ್ ಸ್ಕೇಲ್ ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತರ ಪೈಕಿ ಸ್ಟ್ಯಾನಿ ಸಂದೀಪ್ ವಿರುದ್ಧ ಮಣಿಪಾಲ ಠಾಣೆಯಲ್ಲಿ ಒಂದು ಪ್ರಕರಣ, ಫೈಜಲ್ ವಿರುದ್ಧ ಮಲ್ಪೆ ಠಾಣೆಯಲ್ಲಿ ಒಂದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಒಂದು ಹಾಗೂ ಮಣಿಪಾಲ ಠಾಣೆಯಲ್ಲಿ ಒಂದು ಸೇರಿದಂತೆ ಮೂರು ಪ್ರಕರಣಗಳಿವೆ.

ಇಮ್ತಿಯಾಜ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಮೂರು, ಬ್ರಹ್ಮಾವರ ಠಾಣೆಯಲ್ಲಿ ಕೊಲೆ ಪ್ರಕರಣವೊಂದು, ಮಲ್ಪೆ ಠಾಣೆಯಲ್ಲಿ ಒಂದು ಹಾಗೂ ಮಣಿಪಾಲ ಠಾಣೆಯಲ್ಲಿ ಮೂರು ಸೇರಿದಂತೆ ಎಂಟು ಪ್ರಕರಣಗಳು ದಾಖಲಾಗಿವೆ.

ಅಜಯ್ ಕುಮಾರ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದರೋಡೆ ಪ್ರಕರಣವೊಂದು, ಮಣಿಪಾಲ ಠಾಣೆಯಲ್ಲಿ ಒಂದು ಹಾಗೂ ಶಿರ್ವ ಠಾಣೆಯಲ್ಲಿ ಒಂದು ಸೇರಿದಂತೆ ಮೂರು ಪ್ರಕರಣಗಳಿವೆ. ಸಂತೋಷ್ ದೇವಾಡಿಗ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿದ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಪಿ. ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಶಿರ್ವ ಎಸ್ಸೈ ಅನಿಲ್, ಕಾಪು ಎಸ್ಸೈ ಶುಭಕರ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಸಿಸಿಬಿ (ಸೊಕೊ) ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.