ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟಕ್ಕೂ ಬೆಂಗಳೂರು ಸ್ಪೋಟಕ್ಕೂ ಸಾಮ್ಯತೆ? ಬಿಹಾರದಲ್ಲೂ ಆರು ಸಜೀವ ಬಾಂಬ್ ಪತ್ತೆ!!

ಬೆಂಗಳೂರು: ರಾಮೇಶ್ವರಂನ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಈ ಘಟನೆಯ ಬಗ್ಗೆ ಮಾಹಿತಿಯ ಮಹಾಪೂರ ಹರಿದುಬರುತ್ತಿದ್ದು, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸ್ಫೋಟಕ್ಕೂ ಹಿಂದಿನ ಸ್ಫೋಟಗಳಿಗೂ ಸಾಮ್ಯತೆ ಇದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಈ ಹಿಂದೆ ನಡೆದ ಸ್ಫೋಟಗಳಿಗೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಇರುವ ಸಾಮ್ಯತೆಗಳ ಕುರಿತು ಪೊಲೀಸರು ತನಿಖೆ ನಡೆಸಿದ್ದು, ಮಂಗಳೂರು ಕುಕ್ಕರ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಕಂಡುಬಂದಿದೆ. ಕುಕ್ಕರ್ ಬಾಂಬ್ ಸ್ಫೋಟಕ್ಕೆ ಬಳಸಲಾದ ಸ್ಫೋಟಕಗಳನ್ನು ರಾಮೇಶ್ವರಂ ಕೆಫೆ ಸ್ಫೋಟದಲ್ಲೂ ಬಳಸಲಾಗಿದೆ.

ಎರಡೂ ಕಡೆ ನಡೆದ ಸ್ಫೋಟದ ವೇಳೆ ಹೊರಸೂಸಿರುವ ಹೊಗೆ ಒಂದೇ ಮಾದರಿಯಲ್ಲಿದೆ. ಒಂದೇ ರೀತಿಯ ವಸ್ತುಗಳನ್ನು ಬಳಸಲಾಗಿದೆ. ಬ್ಯಾಟರಿ, ಡಿಟೊನೇಟರ್​​ಗಳು, ನಟ್ಟು, ಬೋಲ್ಟ್ ಎರಡೂ ಸ್ಫೋಟಗಳಲ್ಲಿ ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗಂಭೀರ ತನಿಖೆ ನಡೆಸಲು ನಿರ್ಧರಿಸಿದ್ದಾರೆ ಎಂದು ವರದಿ ಹೇಳಿದೆ.

ಸದ್ಯದ ಮಾಹಿತಿ ಪ್ರಕಾರ ಆರೋಪಿ ಸೇರಿದಂತೆ ಇನ್ನೂ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗುಪ್ತಚರ ತಂಡ ಒಟ್ಟು ನಾಲ್ವರನ್ನು ಬಂಧಿಸಿದೆ. ಶಂಕಿತರು ಇದನ್ನೆಲ್ಲಾ ಏಕೆ ಮಾಡಿದ್ದಾರೆ ಎಂಬುದು ತನಿಖೆಯ ನಂತರ ಸ್ಪಷ್ಟವಾಗಲಿದೆ.

ಏತನ್ಮಧ್ಯೆ, ಬಿಹಾರದ ದರ್ಭಾಂಗದಲ್ಲಿ ಕಾಮಗಾರಿ ನಡೆಯುತ್ತಿರುವ ಕಟ್ಟಡದಲ್ಲಿಯೂ ಆರು ಬಾಂಬ್‌ಗಳು ಪತ್ತೆಯಾಗಿವೆ. ಎರಡು ಬಾಂಬ್‌ಗಳು ಸ್ಫೋಟವಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಎರಡು ಬಾಂಬ್‌ಗಳು ಪೀಸ್‌ಗಳಲ್ಲಿ ಸಿಕ್ಕಿದೆ. ಹುಡುಕಾಟ ನಡೆಸಿದಾಗ ಆರು ಬಾಂಬ್‌ಗಳು ಪತ್ತೆಯಾಗಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.