ಹುಬ್ಬಳ್ಳಿ: ಮಂಗಳವಾರ ಹುಬ್ಬಳ್ಳಿಯ ಹೋಟೆಲ್ವೊಂದರಲ್ಲಿ ವಾಸ್ತು ತಜ್ಞ ಚಂದ್ರಶೇಖರ ಅಂಗಡಿ (ಚಂದ್ರಶೇಖರ ಗುರೂಜಿ) ಅವರನ್ನು ಚಾಕುವಿನಿಂದ ಇರಿದು ಕೊಂದ ಇಬ್ಬರು ಹಂತಕರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಮಹಾಂತೇಶ ಶಿರೂರು ಮತ್ತು ಮಂಜುನಾಥ ಮರೆವಾಡ, ಚಂದ್ರಶೇಖರ ಗುರೂಜಿ ನಡೆಸುತ್ತಿದ್ದ ಸರಳ ವಾಸ್ತುವಿನ ಮಾಜಿ ಉದ್ಯೋಗಿಗಳಾಗಿದ್ದು, ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬೆಳಗಾವಿ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಇಬ್ಬರೂ ಆರೋಪಿಗಳು ಮಂಗಳವಾರ ಮಧ್ಯಾಹ್ನ ಚಂದ್ರಶೇಖರ ಗುರೂಜಿ ಅವರು ತಂಗಿದ್ದ ಹೋಟೆಲ್ ಲಾಬಿಯಲ್ಲಿ ಚಾಕುವಿನಿಂದ ಇರಿದಿದ್ದಾರೆ. ಗಾಯಗಳಿಂದಾಗಿ ಸಾವು ಸಂಭವಿಸಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ನಾವು ತಂಡಗಳನ್ನು ರಚಿಸಿದ್ದೇವೆ ಮತ್ತು ಅವರು ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದೇವೆ. ಆರೋಪಿಗಳಿಬ್ಬರನ್ನೂ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಕರೆತರಲು ನಮ್ಮ ತಂಡ ಅಲ್ಲಿಗೆ ಹೋಗಿದೆ. ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ” ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಲಾಭು ರಾಮ್ ಹೇಳಿದ್ದಾರೆ.
ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಜಾಲತಾಣಗಳಲ್ಲಿ ಊಹಾಪೋಹಗಳು ಹರಿದಾಡುತ್ತಿದ್ದರೂ, ಘಟನೆಯ ತನಿಖೆಯಾಗದೆ ಯಾವುದನ್ನೂ ನಿಖರವಾಗಿ ಹೇಳುವಂತಿಲ್ಲ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ಬಳಿಕ ಸತ್ಯಾಸತ್ಯತೆಗಳು ತಿಳಿಯಲಿದೆ.