ಕಾಶ್ಮೀರದ ಭಯೋತ್ಪಾದಕ ಬೆಂಗಳೂರಿನಲ್ಲಿ ಬಂಧನ: ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಕಾಶ್ಮೀರದ ಭಯೋತ್ಪಾದಕ ತಾಲಿಬ್ ಹುಸೇನ್ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಬಳಿಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

“ಬೆಂಗಳೂರಿನಲ್ಲಿ ಆತನಿಗೆ ಯಾರು ಆಶ್ರಯ ನೀಡಿದ್ದಾರೆ, ಆತ ಎಲ್ಲಿ ಉಳಿದುಕೊಂಡಿದ್ದಾನೆ ಮತ್ತು ಯಾವ ಸಂಘಟನೆಗಳು ಅಥವಾ ಜನರು ಆತನನ್ನು ಬೆಂಬಲಿಸುತ್ತಿದ್ದಾರೆ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

ಭದ್ರತಾ ಕಾರಣಗಳಿಗಾಗಿ ನಡೆಯುತ್ತಿರುವ ತನಿಖೆಯ ವಿವರಗಳನ್ನು ಬಹಿರಂಗಪಡಿಸುವುದಿಲ್ಲ, ಕಾಶ್ಮೀರ ಪೊಲೀಸರು ಬೆಂಗಳೂರಿನಲ್ಲಿ ಆತನನ್ನು ಬಂಧಿಸಿದ್ದಾರೆ ಮತ್ತು ಕರ್ನಾಟಕ ಪೊಲೀಸರು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದ ಅವರು, ” ತನಿಖೆಯ ವಿವರಗಳನ್ನು ನಾವು ಕೇಂದ್ರದೊಂದಿಗೆ ಹಂಚಿಕೊಳ್ಳುತ್ತೇವೆ” ಎಂದರು.

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತು ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಇವರಿಗೆ ಜೀವ ಬೆದರಿಕೆ ಇರುವ ಕುರಿತು ಪ್ರತಿಕ್ರಿಯಿಸಿ, ಯಾರೂ ಪ್ರಚೋದನಕಾರಿ ಹೇಳಿಕೆ ನೀಡಬಾರದು ಎಂದು ಅವರು ಹೇಳಿದರು.