ಬೆಂಗಳೂರು: ಜು. 19ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಆಯೋಜಿಸಲಾದ ಅಖಿಲ ಭಾರತ ಮಟ್ಟದ ಪೊಲೀಸ್ ಕರ್ತವ್ಯ ಕೂಟದ (ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್) ಶ್ವಾನದಳ ವಿಭಾಗದಲ್ಲಿ ರಾಜ್ಯದ ಬೆಂಗಳೂರು ದಕ್ಷಿಣ ನಗರ ಸಶಸ್ತ್ರ ಮೀಸಲು ಪಡೆ ಅಪರಾಧ ಪತ್ತೆ ಶ್ವಾನ ದ್ರೋಣ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದೆ.
ದೇಶದ ಎಲ್ಲ ರಾಜ್ಯಗಳ ಪೊಲೀಸ್ ಶ್ವಾನಗಳು, ಅರೆಸೇನಾ ಪಡೆಗಳ ಶ್ವಾನಗಳು ಈ ಕೂಟದಲ್ಲಿ ಭಾಗವಹಿಸಿವೆ. ಕೂಟದಲ್ಲಿ ನಡೆದ ಅಣಕು ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ದ್ರೋಣ ಉತ್ತಮ ಅಂಕ ಗಳಿಸಿ ಚಿನ್ನದ ಪದಕ ಪಡೆದಿದ್ದಾನೆ.
ರವಿದೇಶ್ ಭಂಡಾರಿ ದ್ರೋಣನ ನಿರ್ವಾಹಕನಾಗಿದ್ದಾರೆ. ದ್ರೋಣ ಕಳೆದ 6 ವರ್ಷಗಳಿಂದ ಪೊಲೀಸ್ ಇಲಾಖೆ, ಅಪರಾಧ ಪತ್ತೆ ವಿಭಾಗದಲ್ಲಿ ಕರ್ತವ್ಯ ಸಲ್ಲಿಸುತ್ತಿದೆ.