ಕುಂದಾಪುರ: ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೋರ್ವರಿಗೆ ಕೊರೊನಾ ಶಂಕಿತ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಠಾಣೆಯನ್ನು ಒಂದು ದಿನದ ಮಟ್ಟಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಸೀಲ್ ಡೌನ್ ಮಾಡಿಲ್ಲ ಎಂದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಸ್ಪಷ್ಟಪಡಿಸಿದ್ದಾರೆ.
ಶಂಕಿತ ಸಿಬ್ಬಂದಿ ಚೆಕ್ ಪೋಸ್ಟ್ ಅಥವಾ ಹೊರಗಡೆ ಎಲ್ಲಿಯೂ ಕರ್ತವ್ಯ ನಿರ್ವಹಿಸಿಲ್ಲ. ಇದು ಕೇವಲ ಶಂಕಿತ ಪ್ರಕರಣವಷ್ಟೇ ಆಗಿದ್ದು, ಹಾಗಾಗಿ ಸೀಲ್ ಡೌನ್ ಅಥವಾ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ಸೋಮವಾರ ಮತ್ತೊಮ್ಮೆ ಗಂಟಲ ದ್ರವದ ಪರೀಕ್ಷೆಗೆ ಕಳುಹಿಸಲಾಗುವುದು. ಸಂಜೆಯೊಳಗೆ ವರದಿ ಸಿಗುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಠಾಣೆಯನ್ನು ಸ್ಯಾನಿಟೈಜ್ ಮಾಡಲಾಗುವುದು. ವರದಿ ನೆಗೆಟಿವ್ ಬಂದರೆ ಮತ್ತೆ ಕಾರ್ಯಾರಂಭ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.