ಉಡುಪಿ: ಕೋವಿಡ್ ಲಾಕ್ ಡೌನ್ ಮಧ್ಯೆಯೂ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರು ಬಂಧಿಸಿ, ಹಲವು ವಾಹನಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಶಿರ್ವ ಸೊರ್ಪು ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಬಳಿ ಮಂಗಳವಾರ ಸಂಜೆ ನಡೆದಿದೆ. ಪೊಲೀಸ್ ದಾಳಿ ವೇಳೆ ಇತರೆ 6 ಮಂದಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳನ್ನು ಮೂಡುಬೆಳ್ಳೆ ಕಂಡಿಗ ನಿವಾಸಿ ಜಯ ಪೂಜಾರಿ (66) ಮತ್ತು ಪ್ರಸಾದ್ ಕುತ್ಯಾರ್ (38) ಎಂದು ಗುರುತಿಸಲಾಗಿದೆ. ಸುಂದರ ಆತ್ರಾಡಿ, ಸೂರ್ಯ ಎಡ್ಮೇರು, ಸುಧಾಕರ ಕಡಂಬು ಮೂಡು ಮಟ್ಟಾರು, ವಿಲ್ಫ್ರೆಡ್ ವಿಲಿಯಂ ಗೋಮ್ಸ್ ಮತ್ತು ಇತರ ಇಬ್ಬರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಕೋಳಿ ಅಂಕಕ್ಕೆ ಉಪಯೋಗಿಸಿದ್ದ ₹ 1,200, 4 ಹುಂಜ ಕೋಳಿಗಳು, ಕತ್ತಿ (ಬಾಳ್) ಹಾಗೂ ಸ್ಥಳದಲ್ಲಿದ್ದ 6 ಸ್ಕೂಟರ್, 4 ಬೈಕ್ ಹಾಗೂ 1 ರಿಟ್ಜ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಎಆರ್ ಪೊಲೀಸ್ ಸಿಬ್ಬಂದಿ ಶಾಮೀಲು:
ಈ ಕೋಳಿ ಅಂಕ ಆಯೋಜನೆಯಲ್ಲಿ ಶಿರ್ವ ಪದವು ನಿವಾಸಿ ಉಡುಪಿ ಡಿಎಆರ್ ಪೊಲೀಸ್ ಸಿಬಂದಿಯೊಬ್ಬರ ಪಾತ್ರವಿದ್ದು, ಅವರು ಮೊಬೈಲ್ ವಾಟ್ಸಪ್ ಮೂಲಕ (ಮೊಬೈಲ್ ಕಟ್ಟ) ಕೋಳಿ ಅಂಕವನ್ನು ಆಯೋಜಿಸಿದ್ದರು ಎನ್ನಲಾಗಿದೆ.
ಆದರೆ, ದಾಳಿ ನಡೆಸಿದ ಪೊಲೀಸರು ಕೋಳಿ ಅಂಕವನ್ನು ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ಹೆಸರನ್ನು ದೂರಿನಲ್ಲಿ ಕೈಬಿಟ್ಟಿದ್ದು, ವಶಪಡಿಸಿಕೊಂಡಿದ್ದ ವಾಹನಗಳ ಪೈಕಿ ಆತನ ಹೊಂಡಾ ಆಕ್ಟಿವಾ ಸ್ಕೂಟರನ್ನು ಹಿಂತಿರುಗಿಸಿದ್ದಾರೆ. ಇದು ವಶಪಡಿಸಿಕೊಂಡಿದ್ದ ಇತರೆ ವಾಹನಗಳ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಳಿ ಅಂಕದಲ್ಲಿ ಕೊರೊನಾ ಸೋಂಕಿತರು ಭಾಗವಹಿಸಿದ್ದು, ಇದಕ್ಕೆ ಸ್ಥಳೀಯ ನಾಗರಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕೋಳಿ ಅಂಕ ಜೂಜಾಟವನ್ನು ಆಯೋಜಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿಯ ಕಾನೂನುಬಾಹಿರ ಕೃತ್ಯದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿರ್ವ ಪರಿಸರದ ನಾಗರಿಕರು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.