ಪೋದಾರ್ ಅಂತರಾಷ್ಟ್ರೀಯ ಶಾಲೆ ಉಡುಪಿ: ವಿದ್ಯಾರ್ಥಿಗಳಿಂದ ಗದ್ದೆ ನಾಟಿ ಕಾರ್ಯ

ಉಡುಪಿ: ಪೋದಾರ್ ಅಂತರಾಷ್ಟ್ರೀಯ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು ಜುಲೈ 15ರಂದು ಮೂಡುಪೆರಂಪಳ್ಳಿಯ ರೈತ ಶಂಕರ್ ಕುಲಾಲ್ ಅವರ ಭತ್ತದ ಗದ್ದೆಗೆ ಭೇಟಿ ನೀಡಿ ಗದ್ದೆ ನಾಟಿ ಕಾರ್ಯದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಈ ಶೈಕ್ಷಣಿಕ ಪ್ರವಾಸದ ಮೂಲಕ ವಿದ್ಯಾರ್ಥಿಗಳು ಭತ್ತದ ಕೃಷಿಯ ವಿವಿಧ ಹಂತಗಳನ್ನು ಪ್ರಾಯೋಗಿಕವಾಗಿ ತಿಳಿದುಕೊಂಡರು.

ರೈತರ ಶ್ರಮ, ಕೃಷಿಯ ಮಹತ್ವ ಹಾಗೂ ಆಹಾರ ಉತ್ಪಾದನೆಯ ಹಿಂದಿರುವ ಪರಿಶ್ರಮವನ್ನು ನೇರವಾಗಿ ಅನುಭವಿಸುವ ಅವಕಾಶ ಅವರಿಗೆ ದೊರೆಯಿತು.

ವಿದ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೃಷಿಯ ಮಹತ್ವವನ್ನು ಅರಿತುಕೊಂಡರು. ಶಿಕ್ಷಕರು ಕೃಷಿಯ ಮಹತ್ವ, ಪರಿಸರ ಸಂರಕ್ಷಣೆ ಹಾಗೂ ರೈತರ ಅಮೂಲ್ಯ ಕೊಡುಗೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ, ಪ್ರಕೃತಿಯ ಬಗ್ಗೆ ಕಾಳಜಿ ಹಾಗೂ ರೈತರ ಪರಿಶ್ರಮದ ಬಗ್ಗೆ ಗೌರವವನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು. ಈ ಶೈಕ್ಷಣಿಕ ಕಾರ್ಯಕ್ರಮವು ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನೇತ್ರಾ ಹೆಚ್ ಅವರ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಿತು.