ಸೂಕ್ತ ವೈದ್ಯಕೀಯ ಹಸ್ತಕ್ಷೇಪದಿಂದ ಶಿಶುಗಳಲ್ಲಿ ನ್ಯುಮೋನಿಯಾ ಸಂಬಂಧಿತ ಮರಣಗಳನ್ನು ತಡೆಗಟ್ಟಬಹುದು

ಜಗತ್ತಿನೆಲ್ಲೆಡೆ ಮಕ್ಕಳ ಸಾವಿನ ಏಕೈಕ ದೊಡ್ಡ ಕಾರಣಗಳಲ್ಲಿ ನ್ಯುಮೋನಿಯಾ ಒಂದಾಗಿದೆಯಲ್ಲದೇ, ಐದು ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಶಿಶುಗಳಲ್ಲಿ ಶೇ. 41ಕ್ಕಿಂತ ಹೆಚ್ಚಿನ ಮರಣಗಳಿಗೆ ಕಾರಣವಾಗಿದೆ. ಇವುಗಳನ್ನು ಸಮಯಕ್ಕೆ ಸರಿಯಾದ ಮತ್ತು ಸೂಕ್ತವಾದ ವೈದ್ಯಕೀಯ ಹಸ್ತಕ್ಷೇಪದೊಂದಿಗೆ ತಡೆಗಟ್ಟಬಹುದಾಗಿದೆ. ಹೆಚ್ಚಿನ ಸಂಖ್ಯೆಯ ನ್ಯುಮೋನಿಯಾ ಸಂಬಂಧಿತ ಸಾವುಗಳನ್ನು ತಡೆಯಬಹುದಾಗಿದೆ. ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಅಥವಾ ಪರಾವಲಂಬಿಗಳಿಂದಾಗಿ ಈ ಶ್ವಾಸಕೋಶದ ತೀವ್ರ ಉಸಿರಾಟದ ಸೋಂಕು ಉಂಟಾಗಬಹುದು. ಇದು ವಾಯು ಮಾಲಿನ್ಯದಿಂದ ಹೆಚ್ಚಾಗುತ್ತದೆ. ಅಲ್ಲದೇ ಇದು ಶಿಶು ಮರಣಗಳ ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ. ಅಪೌಷ್ಟಿಕತೆ, ಕಡಿಮೆ ರೋಗನಿರೋಧಕ ಶಕ್ತಿ ಮತ್ತು ಕಲುಷಿತ ಕುಡಿಯುವ ನೀರಿನಂತಹ ಅಂಶಗಳೊಂದಿಗೆ ಕೂಡ ಸಾವಿನ ಸಾಧ್ಯತೆ ಸಂಬಂಧ ಹೊಂದಿರುತ್ತದೆ.

How to help your child grow up happy - BabyCenter India

ಪ್ರಪಂಚದಲ್ಲೇ ನ್ಯುಮೋನಿಯಾ ಹೊಂದಿರುವ ಮಕ್ಕಳ ಪೈಕಿ ಭಾರತ ಅತ್ಯಧಿಕ ಮರಣ ಪ್ರಮಾಣ ದಾಖಲಿಸಿದೆ. ಆರಂಭಿಕ ಹಂತದಲ್ಲಿಯೇ ಈ ರೋಗ ಪತ್ತೆ ಮಾಡುವುದು, ಶೀಘ್ರ ಚೇತರಿಕೆಗೆ ಬಹಳ ಮುಖ್ಯವಾಗಿರುತ್ತದೆ. ಜೊತೆಗೆ ನ್ಯುಮೋನಿಯಾದ ರೋಗಲಕ್ಷಣಗಳನ್ನು ಪೋಷಕರು ಅರಿಯುವುದು ಹಾಗೂ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಜ್ವರ, ವಾಂತಿ, ದಣಿವು ಅಥವಾ ಚಡಪಡಿಕೆ ಇರುವ ಮಕ್ಕಳಲ್ಲಿ ಪಾಲಕರು ಸಾಮಾನ್ಯವಾಗಿ ಸ್ವಯಂ-ಔಷಧಿ ಕ್ರಮವನ್ನು ಆರಿಸಿಕೊಳ್ಳುತ್ತಾರೆ. ಇದು ದೇಶದಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವ ತಪ್ಪಾಗಿರುತ್ತದೆ.

Recurrent Pneumonia in Children - Pediatric Pulmonologists

ನ್ಯುಮೋನಿಯಾ ರೋಗಲಕ್ಷಣಗಳನ್ನು ಹೊಂದಿರುವ ಮಕ್ಕಳಿಗೆ ಆರೋಗ್ಯ ಸೇವೆ ಪೂರೈಸುವವರಿಂದ(ವೈದ್ಯರು) ಆರಂಭಿಕ ಹಂತದ ಚಿಕಿತ್ಸೆ ಸಾವಿನ ಸಾಧ್ಯತೆ ಕಡಿಮೆ ಮಾಡುತ್ತದೆ ಎಂದು ಅರಿತುಕೊಳ್ಳಲಾಗಿದೆ.

ಸಾಮಾನ್ಯವಾಗಿ ಸೋಂಕು ಉಂಟಾದ ಎರಡು ಅಥವಾ ಮೂರು ದಿನಗಳ ನಂತರ ಕಾಣಿಸಿಕೊಳ್ಳುವ ನ್ಯುಮೋನಿಯಾದ ಲಕ್ಷಣಗಳಲ್ಲಿ ಜ್ವರ, ಬೆವರುವಿಕೆ, ಶೀತ ಜೊತೆಗೆ ನಡುಕ ಮತ್ತು ಉಸಿರಾಟದ ತೊಂದರೆಗಳು ಸೇರಿರುತ್ತವೆ.

ನ್ಯುಮೋನಿಯಾದ ಕೆಲವು ಸಾಮಾನ್ಯ ಲಕ್ಷಣಗಳಲ್ಲಿ ಈ ಕೆಳಗಿನವು ಸೇರಿವೆ:

• ವೇಗವಾಗಿ ಅಥವಾ ಕಷ್ಟಪಟ್ಟು ಉಸಿರಾಡುವುದು

• ಕೆಮ್ಮು (ಕಫಯುಕ್ತ)

• ಕೆಮ್ಮುವಾಗ ಅಥವಾ ಗಟ್ಟಿಯಾಗಿ ಉಸಿರಾಡುವಾಗ ಎದೆ ನೋವು

• ಉಬ್ಬಸ(ವೀಝಿಂಗ್)

• ತುಟಿಗಳು ಅಥವಾ ಉಗುರುಗಳು ನೀಲಿಗಟ್ಟುವುದು

ಸಾಮಾನ್ಯವಾಗಿ ಈ ಮೇಲೆ ಹೇಳಲಾದ ರೋಗಲಕ್ಷಣಗಳನ್ನು ಆಧರಿಸಿ ನ್ಯುಮೋನಿಯಾದ ರೋಗನಿರ್ಣಯ ಕೈಗೊಳ್ಳಲಾಗುತ್ತದೆ. ಸೋಂಕಿನ ಪ್ರಮಾಣ ತಿಳಿಯಲು ಮತ್ತು ನಿರ್ಧರಿಸಲು ಎದೆಯ ಎಕ್ಸ್-ರೇ ಅಗತ್ಯವಾಗಬಹುದು. ಶೀತ, ಜ್ವರ ಮತ್ತು ಇತರ ಉಸಿರಾಟದ ಸೋಂಕುಗಳಿಗೆ ಕಾರಣವಾಗುವ ವೈರಸ್‌ಗಳಿಂದ ನ್ಯುಮೋನಿಯಾದ ಬಹುತೇಕ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ನ್ಯುಮೋನಿಯಾ ಸಾಂಕ್ರಾಮಿಕ ರೋಗವಲ್ಲ, ಆದರೆ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಅದು ಹರಡಬಹುದು. ಸೋಂಕಿನಿಂದ ಕೂಡಿರುವ ಪಾತ್ರೆಗಳು, ಕುಡಿಯುವ ನೀರು ಮತ್ತು ಸಾಮಾನ್ಯ ಸಂಪರ್ಕ ಸ್ಥಳಗಳಾದ ಬಾಗಿಲ ಹಿಡಿಗಳು, ರೇಲಿಂಗ್‌ಗಳು ಇತ್ಯಾದಿಗಳ ಸಂಪರ್ಕದ ಮೂಲಕವೂ ಈ ರೋಗದ ಸೋಂಕಿಗೆ ಗುರಿಯಾಗಬಹುದು.

10 foods you must have during pneumonia for a speedy recovery | The Times of India

 

ಸಾಕಷ್ಟು ಪ್ರಮಾಣದ ವಿಶ್ರಾಂತಿ ಮತ್ತು ಜಲಸೇವನೆಯೊಂದಿಗೆ ದೇಹಕ್ಕೆ ನೀರು ಸೇರುವಂತೆ ಮಾಡುವುದು ಹಾಗೂ ಕೆಮ್ಮು ಮತ್ತು ಜ್ವರವನ್ನು ನಿಯಂತ್ರಿಸಲು ರೋಗಲಕ್ಷಣದ ಚಿಕಿತ್ಸೆಯನ್ನು ಹೊರತುಪಡಿಸಿ, ವೈರಲ್ ನ್ಯುಮೋನಿಯಾಗೆ ಯಾವುದೇ ನಿರ್ದಿಷ್ಟ ಔಷಧಿ ಇರುವುದಿಲ್ಲ. ವೈರಲ್ ನ್ಯುಮೋನಿಯಾದಲ್ಲಿ ದೇಹಸ್ಥಿತಿ ಸಾಮಾನ್ಯವಾಗಿ ಕೆಲವು ದಿನಗಳ ನಂತರ ಸುಧಾರಿಸುತ್ತದೆ, ಆದರೆ ಕೆಮ್ಮು ಹಲವಾರು ವಾರಗಳವರೆಗೆ ಇರಬಹುದು.

Pneumonia in kids: Causes and prevention | Ezyschooling

ಬ್ಯಾಕ್ಟೀರಿಯಾ ಸೋಂಕು ಮತ್ತು ವೈರಲ್ ನ್ಯುಮೋನಿಯಾದ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟಕರವಾದ ಕಾರಣ, ದ್ವಿತೀಯಕ ಸೋಂಕು ತಡೆಯುವುದಕ್ಕೆ ಆ್ಯಂಟಿಬಯಾಟಿಕ್ ಔಷಧಗಳನ್ನು ವೈದ್ಯರು ನೀಡುವರು.

ಯಾರಿಗೆ ಬೇಕಾದರೂ ನ್ಯುಮೋನಿಯಾ ಸೋಂಕು ಉಂಟಾಗಬಹುದು. ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವ, ಅಸ್ತಮಾ ಹೊಂದಿರುವ ಮತ್ತು ಅಕಾಲಿಕವಾಗಿ ಜನಿಸಿದ ಶಿಶುಗಳು ಬೇರೆ ಮಕ್ಕಳಿಗಿಂತ ನ್ಯುಮೋನಿಯಾಗೆ ತುತ್ತಾಗುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಬಹುತೇಕ ಆರೋಗ್ಯವಂತ ಮಕ್ಕಳು ತಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಬಲದ ಮೇಲೆ ನ್ಯುಮೋನಿಯಾವನ್ನು ಎದುರಿಸುತ್ತಾರೆ, ಆದರೆ ರೋಗ ನಿರೋಧಕ ಶಕ್ತಿ ಇಲ್ಲದ ಮಕ್ಕಳು ನ್ಯುಮೋನಿಯಾಗೆ ತುತ್ತಾಗುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಅಪೌಷ್ಟಿಕತೆಯಿಂದ ಮಗುವಿನ ರೋಗ ನಿರೋಧಕ ವ್ಯವಸ್ಥೆ ದುರ್ಬಲಗೊಳ್ಳಬಹುದು. ಅದರಲ್ಲೂ ವಿಶೇಷವಾಗಿ ಕನಿಷ್ಠ ಆರು ತಿಂಗಳವರೆಗೆ ಎದೆಹಾಲು ನೀಡದ ಶಿಶುಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ.

Raising a happy baby | BabyCenter

ಮಗುವಿಗೆ ನ್ಯುಮೋನಿಯಾ ಬರುವ ಸಾಧ್ಯತೆ ಕಡಿಮೆ ಮಾಡಲು ನಿಗದಿಪಡಿಸಿರುವಂತೆ ಸಮಯಕ್ಕೆ ಸರಿಯಾಗಿ ಲಸಿಕೆ ಅತ್ಯಗತ್ಯವಾಗಿರುತ್ತದೆ. ಏಕೆಂದರೆ ಇದು ಮಗುವಿಗೆ ಎಚ್‌ಐಬಿ, ನ್ಯುಮೋಕೊಕಸ್, ದಡಾರ ಮತ್ತು ನಾಯಿಕೆಮ್ಮು (ಪೆರ್ಟುಸಿಸ್) ವಿರುದ್ಧ ರಕ್ಷಣೆ ನೀಡುತ್ತದೆ. ಮಗುವಿಗೆ ನೈಸರ್ಗಿಕ ರೋಗ ನಿರೋಧಕತೆ ಬೆಳೆಸಲು ಉತ್ತಮ ಮಾರ್ಗವೆಂದರೆ ಹುಟ್ಟಿದ ಮೊದಲ 6 ತಿಂಗಳವರೆಗೆ ಸ್ತನ್ಯಪಾನ ಸೇರಿದಂತೆ ಸಾಕಷ್ಟು ಪೋಷಣೆ ನೀಡುವುದಾಗಿರುತ್ತದೆ. ಈ ಮೂಲಕ ಸಾಮಾನ್ಯ ಕಾಯಿಲೆಗಳ ಅವಧಿ ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದಾಗಿರುತ್ತದೆ. ನಿಮ್ಮ 6 ತಿಂಗಳೊಳಗಿನ ಮಗುವಿಗೆ ಉಸಿರಾಟದ ತೊಂದರೆ ಅಥವಾ 102ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹೆಚ್ಚಾಗಿ ದೀರ್ಘಕಾಲದವರೆಗೆ ಜ್ವರ ಇದ್ದರೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಪಡೆಯಿರಿ, ಅದು ನ್ಯುಮೋನಿಯಾ ಸೋಂಕು ಆಗಿರಲೂಬಹುದು.

ಬರಹ: ಡಾ. ಸುದರ್ಶನ್ ಕೆ.ಎಸ್., ಶ್ವಾಸಕೋಶ ರೋಗ ಸಲಹಾತಜ್ಞರು, ಸ್ಪೆಷಲಿಸ್ಟ್ ಆಸ್ಪತ್ರೆ.

ಚಿತ್ರ: ಇಂಟರ್ನೆಟ್