ನವದೆಹಲಿ: ಚೀನಾದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ತರಹದ ಸೋಂಕಿನ ಏಕಾಏಕಿ ಏರಿಕೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ಈ ವೈರಸ್ ನಿಂದ ಯಾವುದೇ ಬೆದರಿಕೆಗಳು ಕಂಡು ಬರುತ್ತಿಲ್ಲವಾದರೂ ಕೇಂದ್ರ ಆರೋಗ್ಯ ಸಚಿವಾಲಯವು ಜಾಗರೂಕವಾಗಿದ್ದು, ಆಸ್ಪತ್ರೆಗಳು ತುರ್ತು ಪರಿಸ್ಥಿತಿಯ ಸಿದ್ದತೆಯನ್ನು ಗಮನಿಸುವಂತೆ ಸೂಚನೆ ನೀಡಿದೆ.
ಚಳಿಗಾಲ ಮತ್ತು ಮಾಲಿನ್ಯಪೂರ್ಣ ಹವಾಮಾನದ ಸಂದರ್ಭದಲ್ಲಿ ವೈರಲ್ ಫ್ಲೂ ಸಾಮಾನ್ಯವಾಗಿದ್ದು, ಸಾರ್ವಜನಿಕರು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಈ ಪರಿಸ್ಥಿತಿಯಲ್ಲಿ ಅಗತ್ಯವೆನಿಸಿದೆ. ವೈದ್ಯರ ಪ್ರಕಾರ ನಿಯಮಿತವಾಗಿ ಕೈಗಳನ್ನು ತೊಳೆಯುವುದು, ಸೀನುವಾಗ ಮತ್ತು ಕೆಮ್ಮುವಾಗ ಮಕ್ಕಳು ತಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳುವಂತೆ ನೋಡಿಕೊಳ್ಳುವುದು, ಇತರರಿಂದ ದೂರ ಸರಿಯುವುದು ಮತ್ತು ಟಿಶ್ಯೂಗಳ ಬಳಕೆ ಮತ್ತು ಸುರಕ್ಷಿತ ಎಸೆಯುವಿಕೆ. ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮತ್ತು ಹೊರಗಡೆ ಹೋಗುವ ಸಂದರ್ಭ ಮಾಸ್ಕ್ ಧರಿಸುವುದು ಮುಂತಾದವನ್ನು ಪಾಲಿಸಬೇಕು.
ವಾರ್ಷಿಕ ಜ್ವರ ಲಸಿಕೆ(ಫ್ಲೂ ಶಾಟ್) ಅತ್ಯಗತ್ಯ. ಭಾರತದಲ್ಲಿ, ಮಾನ್ಸೂನ್ ನಂತರ ಮತ್ತು ಚಳಿಗಾಲದ ಮೊದಲು ಅಥವಾ ತಾಪಮಾನ ಕಡಿಮೆಯಾದಾಗ ಫ್ಲೂ ಲಸಿಕೆಯನ್ನು ಪಡೆಯುವುದು ಉತ್ತಮ. ಲಸಿಕೆಯು ಪ್ರತಿಕಾಯಗಳನ್ನು ಉತ್ಪಾದಿಸಲು ಸುಮಾರು ಎರಡರಿಂದ ನಾಲ್ಕು ವಾರಗಳನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ಫ್ಲೂ ಋತು ಪ್ರಾರಂಭವಾಗುವ ಮೊದಲು ಮಗುವಿನ ದೇಹವು ವೈರಸ್‌ಗಳ ವಿರುದ್ಧ ಹೋರಾಡಲು ಸುಸಜ್ಜಿತವಾಗಿರುತ್ತದೆ.
ಸೋಂಕು ಹರಡುವುದನ್ನು ತಡೆಗಟ್ಟಲು ಪೋಷಕರು ಜ್ವರವಿದ್ದ ಮಗುವನ್ನು ಶಾಲೆಗೆ ಅಥವಾ ಸಾರ್ವಜನಿಕ ಸಭೆಗಳಿಗೆ ಕಳುಹಿಸಬಾರದು. ಶಾಲೆಗಳೂ ಜ್ವರವಿದ್ದ ಮಗುವನ್ನು ಶಾಲೆಗೆ ಬರಲು ಅವಕಾಶ ನೀಡಬಾರದು. ಇದರಿಂದ ಸೋಂಕು ಇತರ ಮಕ್ಕಳಿಗೂ ಹರಡುವ ಸಾಧ್ಯತೆ ಇರುತ್ತದೆ.
ಮನೆಯಲ್ಲಿ ಧೂಳು ಸ್ವಚ್ಛಗೊಳಿಸುವ ಸಂದರ್ಭಗಳಲ್ಲಿ ಗಾಳಿಯಲ್ಲಿ ಹರಡದಂತೆ ಸ್ವಚ್ಛಗೊಳಿಸುವುದು ಉತ್ತಮ. ಸಾಧ್ಯವಿದ್ದಲ್ಲಿ ವ್ಯಾಕ್ಯೂಮ್ ಕ್ಲೀನರ್ ಬಳಸುವುದು ಒಳಿತು. ಬಹು ಮುಖ್ಯವಾಗಿ ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಉತ್ತಮ ಪೋಷಣೆಯುಕ್ತ ಆಹಾರ, ನಿದ್ರೆ ಮತ್ತು ದೈಹಿಕ ಚಟುವಟಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ವೈದರು ಸಲಹೆ ನೀಡಿದ್ದಾರೆ.