ಪ್ರಧಾನ ಮಂತ್ರಿ ಉಜ್ವಲ ಯೋಜನೆ-2 ಜಾರಿ: ಬಡವರಿಗೆ ಉಚಿತ ಅಡುಗೆ, ಅನಿಲ ಸಂಪರ್ಕ 

ಉಡುಪಿ: ಅಡುಗೆ ಅನಿಲ ಸಂಪರ್ಕದಿಂದ ವಂಚಿತರಾಗಿರುವ ಬಡ ಕುಟುಂಬದವರನ್ನು ಗುರುತಿಸಿ, ಅವರಿಗೆ ಅನಿಲ ಸಂಪರ್ಕ ಒದಗಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆ-2 ಅನ್ನು ಅನುಷ್ಠಾನಗೊಳಿಸಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಯೋಜನೆಯ ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ ಜುನೈದ್ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರವು 2017ರಲ್ಲಿ ಆರಂಭಿಸಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯಲ್ಲಿ ಅಡುಗೆ ಅನಿಲ(ಎಲ್.ಪಿ.ಜಿ.) ಸಂಪರ್ಕ ಸಿಗದೇ ಇರುವ ಬಿಪಿಎಲ್ ಕುಟುಂಬಗಳನ್ನು ಗುರುತಿಸಿ ಈ ನೂತನ ಯೋಜನೆಯಲ್ಲಿ  ಸಂಪರ್ಕ ನೀಡಲಾಗುವುದು ಎಂದರು. ಆರಂಭದಲ್ಲಿ ಸೋಶಿಯೋ ಇಕಾನಮಿ ಸರ್ವೆಯ ವರದಿಯಲ್ಲಿರುವ ಬಿಪಿಎಲ್ ಕುಟುಂಬಗಳಿಗೆ ಸಂಪರ್ಕಗಳನ್ನು ನೀಡಲಾಗಿತ್ತು. ನಂತರ ಪರಿಶಿಷ್ಟ ಜಾತಿ – ಪಂಗಡ ಇತ್ಯಾದಿಯವರಿಗೆ ನೀಡಲಾಯಿತು. ಆದರೂ ಕೆಲವು ಕುಟುಂಬಗಳು ವಿವಿಧ ಕಾರಣಗಳಿಂದಾಗಿ ಇನ್ನೂ ಅಡುಗೆ ಅನಿಲ ಸಂಪರ್ಕ ಸಾಧ್ಯವಾಗಿಲ್ಲ, ಅವರಿಗೂ ಸಂಪರ್ಕ ನೀಡಿ ಶೇ 100 ಸಾಧಿಸುವುದು ಈ ಪಿಎಂಯುವೈ – 2 ಉದ್ದೇಶವಾಗಿದೆ ಎಂದರು.
ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿ ಹಿರಿಯ ಪ್ರಾದೇಶಿಕ ಪ್ರಬಂಧಕ ರಮೇಶ್ ನಟರಾಜನ್ ಮಾತನಾಡಿ, ಬಿಪಿಎಲ್ ಕಾರ್ಡ್ ಇದ್ದವರು ಈ ಸಂಪರ್ಕಗಳನ್ನು ಪಡೆಯಬಹುದು, ಬಿಪಿಎಲ್ ಕಾರ್ಡ್ ಇಲ್ಲದವರೂ 14 ಷರತ್ತುಗಳ ಫಾರಂಗೆ ಸಹಿ ಹಾಕಿ, ಸಂಪರ್ಕವನ್ನು ಪಡೆಯಬಹುದು. ತಮ್ಮ ಹತ್ತಿರುವ ಗ್ಯಾಸ್ ಡೀಲರ್ ಬಳಿಗೆ ಹೋಗಿ ಈ ಸೌಲಭ್ಯವನ್ನು ಪಡೆಯಬಹುದು ಎಂದು ಹೇಳಿದರು.
ಮೊದಲ ಬಾರಿಗೆ ಸಂಪರ್ಕ ಪಡೆಯುವಾಗ ನೀಡಲಾಗುವ 999 ರು.ಗಳ ಅಡುಗೆ ಸ್ಟೌ ಮತ್ತು ಸಿಲಿಂಡರ್ ನ ಬೆಲೆಯನ್ನು ಫಲಾನುಭವಿ ನೀಡಬೇಕಾಗುತ್ತದೆ. ಆದರೇ ಅದನ್ನು ಫಲಾನುಭವಿಗೆ ನೀಡಲು ಸಾಧ್ಯವಾಗದಿದ್ದಲ್ಲಿ, ಅವರಿಗೆ ಸಿಗುವ ಸಹಾಯಧನ (ಸಬ್ಸಡಿ)ಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಡುಗೆ ಅನಿಲ ವಿತರಕ ಉಡುಪಿಯ ಬಾಲಾಜಿ ರಾಘವೇಂದ್ರ ರಾವ್ ಮತ್ತು ಕಾರ್ಕಳದ ನಿತ್ಯಾನಂದ ಪೈ ಉಪಸ್ಥಿತರಿದ್ದರು.