ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಜೂನ್ 27: 2019-20 ನೇ ಸಾಲಿನ ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಸಿ.ಎಂ.ಇ.ಜಿ.ಪಿ)ಯಡಿ ಸ್ವ-ಉದ್ಯೋಗ ಸ್ಥಾಪಿಸಲು ಆಸಕ್ತಿ ಇರುವ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯು ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ & ಗ್ರಾಮೋದ್ಯೋಗ ಮಂಡಳಿ (ಕೆ.ವಿ.ಐ.ಬಿ) ಗಳ ಮುಖಾಂತರ ಜಾರಿಗೊಳಿಸಲಾಗುತ್ತಿದೆ.

ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಗರಿಷ್ಠ ಯೋಜನಾ ವೆಚ್ಚ 10.00 ಲಕ್ಷ ರೂ. ಬ್ಯಾಂಕ್ ಸಾಲದೊಂದಿಗೆ ಹೊಸ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸುವವರಿಗೆ ಅವಕಾಶವಿದ್ದು, ಪ್ರಸ್ತುತ ಹೊಂದಿರುವ ಚಟುವಟಿಕೆ/ ಘಟಕಗಳ ವಿಸ್ತರಣೆಗೆ ಅವಕಾಶ ಇರುವುದಿಲ್ಲ. ಯೋಜನಾ ವೆಚ್ಚದ ಶೇ. 25 ರಿಂದ 35 ರವರೆಗೆ ಸಹಾಯಧನ ನೀಡಲಾಗುವುದು.

ಅಭ್ಯರ್ಥಿಯು ಕನಿಷ್ಠ 8 ನೇ ತರಗತಿ ಉತ್ತೀರ್ಣರಾಗಿರಬೇಕು. ಅರ್ಜಿದಾರರಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ವಯೋಮಿತಿಯು ಗರಿಷ್ಠ 35 ವರ್ಷ ಸಾಮಾನ್ಯ ವರ್ಗದವರಿಗೆ ಹಾಗೂ ಗರಿಷ್ಠ 45 ವರ್ಷ ವಿಶೇಷ ವರ್ಗದವರಿಗೆ (ಮಹಿಳೆ/ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ/ ಹಿಂದುಳಿದ ವರ್ಗ/ ಅಲ್ಪ ಸಂಖ್ಯಾತರು / ಮಾಜಿ ಯೋದರು/ಅಂಗವಿಕಲರು).
ನಿರುದ್ಯೋಗಿ ಯುವಕ /ಯುವತಿಯರು ವೆಬ್‍ಸೈಟ್ http://cmegp.kar.nic.in ಮೂಲಕ online ಅರ್ಜಿಯನ್ನು ನೊಂದಾಯಿಸಿ, ಅರ್ಜಿ ಪ್ರತಿಯನ್ನು ನಿಗದಿತ ದಾಖಲಾತಿಗಳೊಂದಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ, ಕೈಗಾರಿಕಾ ಪ್ರದೇಶ, ಮಣಿಪಾಲ, ಉಡುಪಿ (ದೂರವಾಣಿ ಸಂಖ್ಯೆ: 0820-2575650, 0820-2575655) ಹಾಗೂ ಜಿಲ್ಲಾ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ರಜತ್ರಾದಿ, ಬಿ ಬ್ಲಾಕ್, 2ನೇ ಮಹಡಿ, ಮಣಿಪಾಲ, ಉಡುಪಿ (ದೂರವಾಣಿ ಸಂಖ್ಯೆ: 0820-2574855) ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ವಿವರಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ, ಕೈಗಾರಿಕಾ ಪ್ರದೇಶ, ಮಣಿಪಾಲ ಹಾಗೂ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಯವರ ಕಛೇರಿಗಳಲ್ಲಿ ಹಾಗೂ ಕೆವಿಐಬಿ ಕಚೇರಿ, ರಜತಾದ್ರಿ ಮಣಿಪಾಲ ಕಚೇರಿಯಲ್ಲಿ ಸಹ ಪಡೆಯಬಹುದು.
ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಯೋಜನೆಯಲ್ಲಿ ಸಹಾಯಧನ ಪಡೆದವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಅವಕಾಶವಿರುವುದಿಲ್ಲ. ಈ ಯೋಜನೆಯಲ್ಲಿ ಯಾವುದೇ ಆದಾಯ ಮಿತಿ ಇರುವುದಿಲ್ಲ. ಸರ್ಕಾರದ ನಿಯಾಮನುಸಾರ ವಿಶೇಷ ವರ್ಗದ ಅರ್ಜಿದಾರರಿಗೆ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಒಂದು ವಾರದ ಉದ್ಯಮಶೀಲತಾ ತರಬೇತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ಆಗಸ್ಟ್ 31 ರವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇಂಟರ್‍ನೆಟ್‍ನಲ್ಲಿ ತೆಗೆದ ಅರ್ಜಿಯ ಪ್ರಿಂಟ್ ಪ್ರತಿ ಹಾಗೂ ಇತರ ದಾಖಲೆಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಕಛೇರಿಗೆ ಅಥವಾ ಕೆ.ವಿ.ಐ.ಬಿಗೆ ಸಲ್ಲಿಸಲು ಸೆಪ್ಟಂಬರ್ 15 ರವರೆಗೆ ಅವಕಾಶವಿರುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.