ಮಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 5 ವರ್ಷಗಳ ಆಡಳಿತದಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದೆ. ಹಲವು ರೀತಿಯಲ್ಲಿ ಭಾರತವನ್ನು ಬದಲಾಯಿಸಿದೆ. ಭಾರತದ ಹೆಸರು ಜಗತ್ತಿನ ಪ್ರತಿಯೊಂದು ದೇಶದಲ್ಲಿ ಕೇಳುತ್ತಿದೆ. ಪ್ರತಿಯೊಬ್ಬರು ಭಾರತವನ್ನು ಗೌರವಿಸುತ್ತಿದ್ದಾರೆ. ಇದು ನನ್ನಿಂದ ಆಗಿದ್ದಲ್ಲ, ನಿಮ್ಮ ಒಂದು ಮತದಿಂದ ಈ ಬದಲಾವಣೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ ಏ.13ರಂದು ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ನಮ್ಮದು ವಂಶೋದಯ ಅಲ್ಲ, ಅಂತ್ಯೋದಯ್. ಅಂತ್ಯೋದಯದಲ್ಲಿ ಕೆಳಹಂತದವರನ್ನೂ ಕೂಡ ಸನ್ಮಾನಿಸಲಾಗುತ್ತದೆ. ಬಿಜೆಪಿ ರಾಷ್ಟ್ರೀಯವಾದದ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಜೆಡಿಎಸ್ನದು ಪರಿವಾರವಾದ. ನಮ್ಮ ಅವಧಿಯಲ್ಲಿ ಅರ್ಹರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದೇವೆ. ಇದು ನಮ್ಮ ಭಾರತ. ಅಂತ್ಯೋದಯದಲ್ಲಿ ಚಾಯ್ವಾಲಾ ಪ್ರಧಾನಿಯಾಗಬಹುದು ಎಂದರು.
ದೇಶದಲ್ಲಿ ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿ ರಾಜಕೀಯವನ್ನು ಹಾಳು ಮಾಡಿದೆ. ಲೂಟಿಕೋರರಿಗೆ ಸಾಲ ನೀಡಿದೆ. ಹಿರಿಯ ಕಾಂಗ್ರೆಸಿಗರನ್ನು ಗೌರವಿಸಿಲ್ಲ. ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕಷ್ಣನ್ ಅವರ ಸ್ಮಾರಕ ನಿರ್ಮಿಸಿದ್ದಾರಾ? ಎಂದ ಮೋದಿ ನಾವು ರಾಮನಾಥ್ಪುರಂನಲ್ಲಿ ಮಾಜಿ ರಾಷ್ಟ್ರಪತಿ ಎಪಿಜಿ ಅಬ್ದುಲ್ ಕಲಾಂ ಸ್ಮಾರಕ ನಿರ್ಮಾಣ ಮಾಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಛಾಟಿ ಬೀಸಿದರು.
ಭಾರತೀಯ ಸೇನೆಯು ಉಗ್ರರ ಮನೆಗೆ ನುಗ್ಗಿ ಹೊಡೆದು ಬಂದರೂ, ವಿಪಕ್ಷ ನಾಯಕರು ಅನುಮಾನಪಡುತ್ತಾರೆ. ಸೇನೆ ಸುಳ್ಳು ಹೇಳುತ್ತದೆ, ಸೇನಾ ಮುಖ್ಯಸ್ಥರನ್ನು ಗಲ್ಲಿ ರೌಡಿ ಎನ್ನುತ್ತಾರೆ, ಇದು ಉತ್ತಮ ಬೆಳವಣಿಗೆಯಲ್ಲ.
ಶಬರಿಮಮಲೆ ಅಯ್ಯಪ್ಪ ವಿಚಾರವಾಗಿ ಹೋರಾಟ ಮಾಡಿದವರನ್ನು ಕಮ್ಯೂನಿಸ್ಟ್ ಸರ್ಕಾರ ಬಂಧಿಸುತ್ತದೆ. ಅಯ್ಯಪ್ಪ ಹೆಸರು ಹೇಳುವಂತಿಲ್ಲ. ಬಿಜೆಪಿಯ ಅಭ್ಯರ್ಥಿಯನ್ನೇ ಜೈಲಿಗೆ ಹಾಕಿದ್ದಾರೆ ಎಂದರು.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಲೋಕಸಭಾ ಚುನಾವಣಾ ಉಸ್ತುವಾರಿ ವಿ. ಸುನಿಲ್ ಕುಮಾರ್, ಸಿಟಿ ರವಿ, ಉದಯ ಕುಮಾರ್ ಶೆಟ್ಟಿ, ಕರಾವಳಿಯ ಶಾಸಕರು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು.