ಹಿಂದುತ್ವದ ಭದ್ರಕೋಟೆಗೆ ಪ್ರಧಾನಿಯ ಆಗಮನ: ಏ.14 ರಂದು ಮೋದಿ ಮಂಗಳೂರಿಗೆ

ಮಂಗಳೂರು: ಅವಿಭಜಿತ ದ.ಕ ಜಿಲ್ಲೆಯ ಭಾಜಪಾ ಕಾರ್ಯಕರ್ತರು ಬಹುದಿನಗಳಿಂದ ಕಾತರದಿಂದ ಕಾಯುತ್ತಿದ್ದ ಘಳಿಗೆ ಬಂದೇ ಬಿಟ್ಟಿದೆ. ಹಿಂದುತ್ವದ ಭದ್ರಕೋಟೆ ಎಂದೇ ಹೆಸರುವಾಸಿಯಾದ ಅವಳಿ ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶವನ್ನು ಚಿಕ್ಕಬಳ್ಳಾಪುರದಿಂದ ಮಂಗಳೂರಿಗೆ ಸ್ಥಳಾಂತರಿಸಲಾಗಿದ್ದು ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಪ್ರಚಾರ ನಡೆಯಲಿದೆ.

ಈ ಹಿಂದೆ ಏಪ್ರಿಲ್ 14 ರಂದು ದೇವನಹಳ್ಳಿಯಲ್ಲಿ ಸಮಾವೇಶ ನಿಗದಿಯಾಗಿತ್ತು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಸಮಾವೇಶ ಇದೀಗ ಮಂಗಳೂರಿಗೆ ಸ್ಥಳಾಂತರವಾಗಿದೆ.

ಮಂಗಳೂರಿನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಸಂಜೆ ಬೆಂಗಳೂರಿನಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಹೆಬ್ಬಾಳ-ಬ್ಯಾಟರಾಯನಪುರದಲ್ಲಿ ಸಂಜೆ 6:00 ರಿಂದ 7:00 ರವರೆಗೆ ಪಥಸಂಚಲನ ನಡೆಯಲಿದೆ.

ಮೋದಿ ಹಾಗೂ ಮಂಗಳೂರಿನ ಸಂಬಂಧ ಇಂದು ನಿನ್ನೆಯದಲ್ಲ. ದೇಶದಲ್ಲೇ ಪ್ರಪ್ರಥಮ ಬಾರಿಗೆ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ನೀಡಿದ ಹೆಗ್ಗಳಿಕೆ ಅವಿಭಜಿತ ದ.ಕ ಜಿಲ್ಲೆಗಿದೆ. ಇದನ್ನು ಖುದ್ದು ಮೋದಿಯೇ ತಮ್ಮ ಸಂದರ್ಶನದಲ್ಲಿ ಉಲ್ಲೇಖಿಸಿದ್ದರು. ಈ ಹಿಂದಿನ ಚುನಾವಣೆಯಲ್ಲಿಯೂ ಮಂಗಳೂರು ಹಾಗೂ ಉಡುಪಿಗೆ ಭೇಟಿ ನೀಡಿದ್ದ ಮೋದಿ ಇದೀಗ ಮತ್ತೊಮ್ಮೆ ಮಂಗಳೂರಿಗೆ ಬರುತ್ತಿರುವುದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.