ಕೊರೋನಾ ಮಣಿಸಲು ಲಸಿಕೆಯೊಂದೆ ಪರಿಹಾರ: ನರೇಂದ್ರ ಮೋದಿ

ದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ, ನಾಲ್ಕನೇ ಅಲೆ ಶುರುವಾಗಿರುವ ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿದ್ದು, ವೀಡಿಯೋ ಕಾನ್ಪರೆನ್ಸ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶದಲ್ಲಿ ಕೊರೋನಾ ಸಂಕಟ ಇನ್ನೂ ತಗ್ಗಿಲ್ಲ, ಕೊರೋನಾ ಮಣಿಸಲು ಇರುವ ಒಂದೇ ದಾರಿಯೆಂದರೆ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳುವುದು ಎಂದರು.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಜೊತೆಗೂಡಿ ಕೊರೋನಾ ಜೊತೆ ಹೋರಾಡಬೇಕು. ಹೆಚ್ಚುತ್ತಿರುವ ಕೊರೋನಾ ಕೇಸ್ ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಬೂಸ್ಟರ್ ಡೋಸ್ ಗಳನ್ನು ತೆಗೆದುಕೊಳ್ಳುವುದರಿಂದ ಸುರಕ್ಷತೆಯಲ್ಲಿ ಇನ್ನಷ್ಟು ಧೃಢತೆ ಬರುವುದು ಎಂದು ಹೇಳಿದರು.

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದ್ದು, ಆಯಾಯ ರಾಜ್ಯಗಳು ತಮ್ಮ ರಾಜ್ಯಗಳಲ್ಲಿಯೂ ಮೌಲ್ಯವರ್ಧಿತ ತೆರಿಗೆಯನ್ನು ಕಡಿತ ಮಾಡಬೇಕೆಂದು ಸೂಚಿಸಲಾಗಿತ್ತು. ಕೆಲವು ರಾಜ್ಯಗಳು ಕೇಂದ್ರದ ಮಾತಿಗೆ ಬೆಲೆಕೊಟ್ಟು ಸುಂಕ ಕಡಿತ ಮಾಡಿದ್ದರೂ, ಕೆಲವು ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಸುಂಕ ಕಡಿತ ಮಾಡಿಲ್ಲ.

ಜನಸಾಮಾನ್ಯರ ಜೇಬಿಗೆ ಹೊರೆಯಾಗದಂತೆ ಪೆಟ್ರೋಲ್-ಡಿಸೇಲ್ ಬೆಲೆಗಳನ್ನು ಕಡಿಮೆ ಮಾಡಲು ಎಲ್ಲಾ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಮೌಲ್ಯವರ್ಧಿತ ತೆರಿಗೆಯನ್ನು ಕಡಿತ ಮಾಡಬೇಕು ಎಂದು ಮನವಿ ಮಾಡಿದರು.