“ಉಕ್ರೇನ್ನಲ್ಲಿ ತಕ್ಷಣದ ಕದನ ವಿರಾಮ ಮತ್ತು ಸಮಸ್ಯೆಗೆ ಪರಿಹಾರಕ್ಕಾಗಿ ಸಂವಾದ ಮತ್ತು ಕಾರ್ಯತಂತ್ರದ ಹಾದಿಯನ್ನು ಹಿಡಿಯಲು ನಾವು ಮನವಿ ಮಾಡಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರನ್ನು ಭೇಟಿಯಾದರು. ಕೋಪನ್ ಹ್ಯಾಗನ್ ನಲ್ಲಿ ಉಭಯ ಸರ್ಕಾರಗಳು ಉದ್ದೇಶ ಪತ್ರಗಳು ಮತ್ತು ತಿಳುವಳಿಕೆ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡವು.
ಈ ಸಭೆಯಲ್ಲಿ, ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಡೆನ್ಮಾರ್ಕ್ ಮತ್ತು ಇಡೀ ಯೂರೋಪಿಯನ್ ಒಕ್ಕೂಟವು ಉಕ್ರೇನ್ ಮೇಲೆ ರಷ್ಯಾದ ಅಪ್ರಚೋದಿತ ಆಕ್ರಮಣವನ್ನು ಖಂಡಿಸುತ್ತದೆ ಹೇಳಿದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಭಾರತದ ಪ್ರಧಾನಿ ಮೋದಿ ಉಕ್ರೇನ್ನಲ್ಲಿ ತಕ್ಷಣದ ಕದನ ವಿರಾಮಕ್ಕೆ ಮನವಿ ಮಾಡಿದ್ದೇವೆ ಎಂದರು.
ಭಾರತದಲ್ಲಿ ಪವನ ಶಕ್ತಿ, ಶಿಪ್ಪಿಂಗ್, ಕನ್ಸಲ್ಟೆನ್ಸಿ, ಆಹಾರ ಸಂಸ್ಕರಣೆ ಮತ್ತು ಎಂಜಿನಿಯರಿಂಗ್ ಸೇರಿದಂತೆ 200 ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ ಭಾರತದ ಪ್ರಧಾನ ಮಂತ್ರಿ, “ನಮ್ಮ ಎರಡು ದೇಶಗಳು ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಯ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ. ನಾವಿಬ್ಬರೂ ಒಟ್ಟಿಗೆ ಹಲವಾರು ಪೂರಕ ಶಕ್ತಿಗಳನ್ನು ಹೊಂದಿದ್ದೇವೆ” ಎಂದು ಡೆನ್ಮಾರ್ಕ್ ಮತ್ತು ಭಾರತದ ಸಂಬಂಧದ ಬೆಸುಗೆಯ ಬಗ್ಗೆ ತಿಳಿಸಿದರು.