ಬ್ರಿಕ್ಸ್​ ಶೃಂಗಸಭೆ ಭಾಗವಹಿಸಲುಜೋಹಾನ್ಸ್​ಬರ್ಗ್​ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ) : ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.ಆಫ್ರಿಕಾದ ನೃತ್ಯಗಾರರು ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿದರು. ಇದೇ ವೇಳೆ ಭಾರತೀಯ ಶೈಲಿಯ ಡೋಲು, ವಾದ್ಯಗಳು ಮೊಳಗಿದವು.ಬ್ರಿಕ್ಸ್​ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ರಾಜಧಾನಿ ಜೋಹಾನ್ಸ್​ಬರ್ಗ್​ಗೆ ಬಂದಿಳಿದರು. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಸಾಂಪ್ರದಾಯಿಕ ಶೈಲಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ನಂತರ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಭಾರತೀಯ ವಲಸಿಗರು ಮೋದಿ ಅವರನ್ನು ಕಂಡ ತಕ್ಷಣ ‘ಭಾರತ್ ಮಾತಾ ಕಿ ಜೈ’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನು ಕೂಗಿದರು. ದಕ್ಷಿಣ ಆಫ್ರಿಕಾ ಗಣರಾಜ್ಯದ ಉಪಾಧ್ಯಕ್ಷ ಪೌಲ್ ಶಿಪೋಕೋಸಾ ಮಶಾತಿಲೆ ಅವರು ಮೋದಿಯನ್ನು ಔಪಚಾರಿಕವಾಗಿ ದೇಶಕ್ಕೆ ಸ್ವಾಗತಿಸಿದರು.
ಆಗಸ್ಟ್ 22 ರಿಂದ 24 ರವರೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುವ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಅಧ್ಯಕ್ಷ ಮಟಮೆಲಾ ಸಿರಿಲ್ ರಮಾಫೋಸಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ಇದೇ ವೇಳೆ ಬ್ರಿಕ್ಸ್ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಕ್ಸಿ- ಮೋದಿ ಭೇಟಿ ಮೇಲೆ ನಿರೀಕ್ಷೆ: ಚೀನಾದ ಜೊತೆಗೆ ಗಡಿ ತಂಟೆ ಉಂಟಾಗಿರುವ ನಡುವೆಯೇ ಬ್ರಿಕ್ಸ್ ಸಭೆಯಲ್ಲಿ ಭಾರತ ಸೇರಿದಂತೆ ಸದಸ್ಯ ರಾಷ್ಟ್ರವಾದ ಚೀನಾ ಕೂಡ ಭಾಗವಹಿಸಲಿದೆ. ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರು ಸಭೆಯಲ್ಲಿ ಹಾಜರಿರಲಿದ್ದಾರೆ. ಇಬ್ಬರ ನಡುವಿನ ಮಾತುಕತೆಯ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದೆ. ಈ ವರ್ಷದ ಬ್ರಿಕ್ಸ್​ ಸಭೆಗೆ ದಕ್ಷಿಣ ಆಫ್ರಿಕಾ ಅಧ್ಯಕ್ಷತೆ ವಹಿಸಿದೆ. 2019 ರ ಬಳಿಕ ಮೊದಲ ಬಾರಿಗೆ ಇಲ್ಲಿ ಶೃಂಗಸಭೆ ನಡೆಯುತ್ತಿದೆ. ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಸದಸ್ಯರಾಗಿವೆ.

ರಾಕಿ ಕಟ್ಟುವ ಮೂಲಕ ಸ್ವಾಗತ: ದಕ್ಷಿಣ ಆಫ್ರಿಕಾದಲ್ಲಿನ ಆರ್ಯ ಸಮಾಜ ಅಧ್ಯಕ್ಷೆ ಅರ್ಥಿ ನಾನಕಚಂದ್ ಶಾನಂದ್ ಅವರು ಪ್ರಧಾನಿ ಮೋದಿಗೆ ರಾಕಿ ಕಟ್ಟಿದರು.ವಿಮಾನ ನಿಲ್ದಾಣವಲ್ಲದೇ, ಜೋಹಾನ್ಸ್‌ಬರ್ಗ್‌ನಲ್ಲಿರುವ ಸ್ಯಾಂಡ್‌ಟನ್ ಸನ್ ಹೋಟೆಲ್‌ನ ಹೊರಗೆ ಭಾರತೀಯರು ಡೋಲುಗಳು, ಕೆಲ ವಾದ್ಯಗಳ ಸಮೇತ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸ್ವಾಮೀಜಿಗಳು, ಜೈನ ಮುನಿಗಳು ಸೇರಿದಂತೆ ಹಲವರು ದೇವರ ಗೀತೆಗಳನ್ನು ಹಾಡುವ ಮೂಲಕವೂ ಮೋದಿಯನ್ನು ಬರಮಾಡಿಕೊಳ್ಳಲಾಯಿತು.

‘ಮೋದಿ ಅದ್ಭುತ ನಾಯಕ’: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ಮಾತನಾಡಿ, ಪ್ರಧಾನಿ ಅವರೊಬ್ಬ ಅದ್ಭುತ ನಾಯಕ ಎಂದು ಬಣ್ಣಿಸಿದರು. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಆದ್ದರಿಂದ ನಾವೆಲ್ಲಾ ಇಲ್ಲಿ ಸೇರಿಕೊಂಡು ಸ್ವಾಗತಿಸಲು ಬಯಸಿದ್ದೇವೆ ಎಂದು ಹೇಳಿದರು.