ನವದೆಹಲಿ: ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಮೂರು ರೈಲುಗಳ ಮಧ್ಯೆ ಭೀಕರ ಅಪಘಾತದ ಸ್ಥಳವನ್ನು ಸಮೀಕ್ಷೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಒಡಿಶಾಗೆ ತೆರಳಿದರು. ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದು ಮತ್ತು 900 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಬಗ್ಗೆ ವರದಿಗಳಾಗಿವೆ.
ವಿವರಗಳ ಪ್ರಕಾರ, ಪ್ರಧಾನಿ ಮೋದಿ ಮೊದಲು ರೈಲು ಅಪಘಾತದ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಲಿದ್ದು, ಮತ್ತು ನಂತರ ಕಟಕ್ನ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಖುದ್ದಾಗಿ ಕಾಣಲಿದ್ದಾರೆ
ಒಡಿಸಾಗೆ ತೆರಳುವ ಮುನ್ನ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಸಭೆ ಕರೆದಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಏತನ್ಮಧ್ಯೆ, ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿದಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಲಭ್ಯವಿರುವ ದಾಖಲೆಗಳ ಪ್ರಕಾರ ಭಾರತದಲ್ಲಿ ನಾಲ್ಕನೇ ಮಾರಣಾಂತಿಕ ರೈಲು ಅಪಘಾತ ಇದಾಗಿದ್ದು ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ಮತ್ತು ಭುವನೇಶ್ವರದಿಂದ 170 ಕಿಮೀ ಉತ್ತರಕ್ಕೆ ಇರುವ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದ ಬಳಿ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ರೈಲ್ವೆ ಸಚಿವಾಲಯವು ತನಿಖೆ ಆದೇಶ ಹೊರಡಿಸಿದ್ದು, ಎಲ್ಲಾ ಕೋನಗಳಲ್ಲೂ ತನಿಖೆ ಕೈಗೊಳ್ಳಲಾಗುತ್ತಿದೆ.