ನವದೆಹಲಿ: ಓಮಿಕ್ರಾನ್ ಕೊರೊನಾ ರೂಪಾಂತರ ತಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಹಿತಿ ಪಡೆದುಕೊಂಡಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಜಾಗತಿಕ ಪ್ರಯಾಣ ನಿರ್ಬಂಧ ಸಡಿಲಿಕೆಯನ್ನು ಮರುಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ವೇಳೆ ಇತ್ತೀಚೆಗೆ ದಕ್ಷಿಣ ಆಫ್ರಿಕಾ, ಬೊಟ್ಸ್ವಾನಾ, ಹಾಂಕಾಂಗ್, ಇಸ್ರೇಲ್ ಹೀಗೆ ನಾಲ್ಕೈದು ದೇಶಗಳಲ್ಲಿ B.1.1.529 ಓಮಿಕ್ರಾನ್(Omicron) ಎಂಬ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಭಾರತದ ಮೇಲೆ ಇವುಗಳ ಪರಿಣಾಮವನ್ನೂ ಚರ್ಚೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಹೊಸ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯದ ಬಗ್ಗೆ ಮಾತನಾಡಿದ್ದು, ಜನತೆ ಹೆಚ್ಚು ಜಾಗರೂಕರಾಗಿರಬೇಕು. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಎಂದು ಕರೆ ನೀಡಿದ್ದಾರೆ ಎಂದು ಪಿಎಂಒ ಮಾಹಿತಿ ನೀಡಿದೆ.
ಅಂತಾರಾಷ್ಟ್ರೀಯ ವಿಮಾನದಲ್ಲಿ ಆಗಮಿಸುವ ಎಲ್ಲಾ ಪ್ರಯಾಣಿಕರ ಮೇಲೆಯೂ ನಿಗಾ ವಹಿಸಬೇಕು. ಅಲ್ಲದೆ, ಪ್ರಮುಖವಾಗಿ ಅಪಾಯವೆಂದು ಗುರುತಿಸಲಾಗಿರುವ ದೇಶಗಳಿಂದ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕೆಂದು ಮೋದಿ ಹೇಳಿದ್ದಾರೆ.