ಭುವನೇಶ್ವರ: ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಳಗಾದವರನ್ನು ಶನಿವಾರ ಭೇಟಿ ಮಾಡಿದ ಪ್ರಧಾನಿ ಮೋದಿ, ಸಂತ್ರಸ್ತ ಪ್ರಯಾಣಿಕರಿಗೆ ಸಹಾಯ ಮಾಡಲು ಮತ್ತು ಚಿಕಿತ್ಸೆ ನೀಡಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಹೇಳಿದರು. “ಇದೊಂದು ಗಂಭೀರ ಘಟನೆಯಾಗಿದ್ದು, ಪ್ರತಿಯೊಂದು ಕೋನದಿಂದ ತನಿಖೆಗೆ ಸೂಚನೆಗಳನ್ನು ನೀಡಲಾಗಿದೆ. ತಪ್ಪಿತಸ್ಥರು ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ” ಎಂದು ಅವರು ಹೇಳಿದರು.
ದುರಂತದಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಸರಕಾರ ಬೆಂಬಲವಾಗಿ ನಿಂತಿದೆ ಎಂದು ಅವರು ಭರವಸೆ ನೀಡಿದರು.
ಭುವನೇಶ್ವರದಿಂದ ಉತ್ತರಕ್ಕೆ 170 ಕಿಮೀ ದೂರದಲ್ಲಿರುವ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಘಟನೆ ನಡೆದ ಸ್ಥಳಕ್ಕೆ ಪ್ರಧಾನಿ ಮೋದಿ ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ಬಂದಿಳಿದರು. ಬಾಲಸೋರ್ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದರು.
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಪ್ರಧಾನಿ ಸ್ಥಳ ಪರಿಶೀಲನೆ ನಡೆಸಿದರು. ದುರಂತ ನಡೆದ ಸ್ಥಳದಿಂದಲೇ ಸಂಪುಟ ಕಾರ್ಯದರ್ಶಿ ಮತ್ತು ಆರೋಗ್ಯ ಸಚಿವರೊಂದಿಗೆ ಮಾತನಾಡಿದರು. ಗಾಯಗೊಂಡವರಿಗೆ ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬಗಳು ಅನಾನುಕೂಲತೆಯನ್ನು ಎದುರಿಸದಂತೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಸಂತ್ರಸ್ತರಿಗೆ ಅಗತ್ಯವಿರುವ ಸಹಾಯವನ್ನು ನೀಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಸರ್ಕಾರಿ ಮೂಲಗಳ ಪ್ರಕಾರ, ಬೃಹತ್ ದುರಂತವನ್ನು ನಿಭಾಯಿಸಲು ಅವರು ‘ಸಂಪೂರ್ಣ ಸರ್ಕಾರ’ ವಿಧಾನಕ್ಕೆ ಒತ್ತು ನೀಡಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಪಘಾತದ ನಂತರ ಮರುಸ್ಥಾಪನೆ ಕಾರ್ಯಕ್ಕೆ ಎಲ್ಲಾ ಪ್ರಯತ್ನಗಳನ್ನು ನಿರ್ದೇಶಿಸಬೇಕು ಮತ್ತು ಇದು ರಾಜಕೀಯಕ್ಕೆ ಸಮಯವಲ್ಲ ಎಂದಿದ್ದಾರೆ. “ಇದು ರಾಜಕೀಯ ಮಾಡುವ ಸಮಯವಲ್ಲ, ಆದರೆ ಪುನಃಸ್ಥಾಪನೆ ಕಾರ್ಯದತ್ತ ಗಮನ ಹರಿಸುವ ಸಮಯ” ಎಂದು ಅಶ್ವಿನಿ ವೈಷ್ಣವ್ ಹೇಳಿದರು.