ಉಜ್ಜಯಿನಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಮಹಾಕಾಲ್ ಲೋಕ್ ಯೋಜನೆಯ ಮೊದಲ ಹಂತವನ್ನು ದೇಶಕ್ಕೆ ಸಮರ್ಪಿಸಿದರು. ಮಹಾಕಾಲ್ ದೇವಸ್ಥಾನದಲ್ಲಿ ಪೂಜೆ ನಡೆಸಿ ಆರತಿಯನ್ನು ಬೆಳಗಿದರು.
ಉದ್ಘಾಟನಾ ಸಮಾರಂಭದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಉಜ್ಜಯಿನಿಯು ಸಾವಿರಾರು ವರ್ಷಗಳಿಂದ ಭಾರತದ ಸಂಪತ್ತು ಮತ್ತು ಸಮೃದ್ಧಿ, ಜ್ಞಾನ ಮತ್ತು ಘನತೆ, ನಾಗರಿಕತೆ ಮತ್ತು ಸಾಹಿತ್ಯವನ್ನು ಮುನ್ನಡೆಸಿದೆ. ಉಜ್ಜಯಿನಿಯ ಪ್ರತಿಯೊಂದು ಕಣವೂ ಆಧ್ಯಾತ್ಮಿಕತೆಯಲ್ಲಿ ಮುಳುಗಿದೆ ಮತ್ತು ಅದು ಪ್ರತಿ ಮೂಲೆ ಮೂಲೆಯಲ್ಲಿಯೂ ಅಲೌಕಿಕ ಶಕ್ತಿಯನ್ನು ರವಾನಿಸುತ್ತದೆ. ರಾಷ್ಟ್ರವು ಯಶಸ್ಸಿನ ಶಿಖರವನ್ನು ತಲುಪಲು ತನ್ನ ಸಾಂಸ್ಕೃತಿಕ ಔನ್ನತ್ಯವನ್ನು ಮುಟ್ಟಿ ತನ್ನ ಅಸ್ಮಿತೆಯ ಜೊತೆಗೆ ಹೆಮ್ಮೆಯಿಂದ ನಿಲ್ಲುವುದು ಅಗತ್ಯ. ಇಂದಿನ ನವ ಭಾರತವು ತನ್ನ ಪ್ರಾಚೀನ ಮೌಲ್ಯಗಳೊಂದಿಗೆ ಮುನ್ನಡೆಯುತ್ತಿದೆ ಮತ್ತು ನಂಬಿಕೆಯೊಂದಿಗೆ ವಿಜ್ಞಾನ ಮತ್ತು ಸಂಶೋಧನೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿದೆ. ಭಾರತವು ತನ್ನ ವೈಭವ ಮತ್ತು ಸಮೃದ್ಧಿಯನ್ನು ಪುನಃಸ್ಥಾಪಿಸುತ್ತಿದೆ ಮತ್ತು ಇಡೀ ಜಗತ್ತು ಮತ್ತು ಇಡೀ ಮಾನವಕುಲವು ಇದರಿಂದ ಪ್ರಯೋಜನ ಪಡೆಯುತ್ತದೆ. ಭಾರತದ ದೈವತ್ವವು ಶಾಂತಿಯುತ ಜಗತ್ತಿಗೆ ದಾರಿ ಮಾಡಿಕೊಡುತ್ತದೆ. ಭಾರತದಲ್ಲಿ ಧರ್ಮ ಎನ್ನುವುದು ನಮ್ಮ ಕರ್ತವ್ಯಗಳ ಸಾಮೂಹಿಕ ನಿರ್ಣಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಡಾ. ವೀರೇಂದ್ರ ಕುಮಾರ್, ಜ್ಯೋತಿರಾದಿತ್ಯ ಸಿಂಧಿಯಾ, ಫಗ್ಗನ್ ಸಿಂಗ್ ಕುಲಸ್ತೆ, ಮತ್ತು ಪ್ರಹ್ಲಾದ್ ಪಟೇಲ್ ಉಪಸ್ಥಿತರಿದ್ದರು.
ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ನಿರ್ಮಿಸಲಾದ ಶ್ರೀ ಮಹಾಕಾಲ್ ಕಾರಿಡಾರ್‌ನ ಅಂದಾಜು ವೆಚ್ಚ 800 ಕೋಟಿ ರೂಪಾಯಿಗಳು. ಈ ಯೋಜನೆಯ ಮೊದಲ ಹಂತದಲ್ಲಿ ಸುಮಾರು 351 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾಕಾಲ್ ಲೋಕ್, ರುದ್ರಸಾಗರ, ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಅನೇಕ ಕಟ್ಟಡಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದೆ. ಎರಡನೇ ಹಂತದ ಕಾಮಗಾರಿ 2023-24ರಲ್ಲಿ ಪೂರ್ಣಗೊಳ್ಳಲಿದೆ.
ಚಿತ್ರಕೃಪೆ: ನರೇಂದ್ರ ಮೋದಿ/ಟ್ವಿಟರ್