ಮೂರನೇ ಹಂತದ ಮತದಾನ: ಗಾಂಧಿನಗರದಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ

ನವದೆಹಲಿ: ಲೋಕಸಭೆ ಚುನಾವಣೆಯ 3 ನೇ ಹಂತದ ಮತದಾನ ಮಂಗಳವಾರ ಆರಂಭವಾಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಇಂದು ಮೂರನೇ ಹಂತದ ಮತದಾನ. ನಮ್ಮ ದೇಶದಲ್ಲಿ ‘ದಾನ’ಕ್ಕೆ ಹೆಚ್ಚಿನ ಮಹತ್ವವಿದ್ದು, ಅದೇ ಉತ್ಸಾಹದಲ್ಲಿ ದೇಶವಾಸಿಗಳು ಸಾಧ್ಯವಾದಷ್ಟು ಮತ ಚಲಾಯಿಸಬೇಕು. ಇನ್ನೂ 4 ಸುತ್ತಿನ ಮತದಾನ ಬಾಕಿ ಇದೆ” ಎಂದರು.

ಗುಜರಾತಿನ ಮತದಾರನಾಗಿ ನಾನು ನಿಯಮಿತವಾಗಿ ಮತ ಚಲಾಯಿಸುವ ಏಕೈಕ ಸ್ಥಳ ಇದಾಗಿದ್ದು, ಅಮಿತ್ ಭಾಯ್ ಇಲ್ಲಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಅಹಮದಾಬಾದ್‌ನಲ್ಲಿ ಮತದಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತಿಸಿದರು.