ನವದೆಹಲಿ: 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣ ನೀತಿಯನ್ನು ಸಾರಾಸಗಟಾಗಿ ತಿರಸ್ಕರಿಸಲು ಕರೆ ನೀಡಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಪ್ರತಿಪಾದಿಸಿದರು ಮತ್ತು “ಪರಿವಾರವಾದ” ವಿರುದ್ಧ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ಮೂರು ಅನಿಷ್ಟಗಳ ವಿರುದ್ಧ ನಾವು ಹೋರಾಡಬೇಕಾಗಿದೆ ಎಂದು ಅವರು ಹೇಳಿದರು.
#WATCH | Prime Minister Narendra Modi hoists the National Flag at the Red Fort in Delhi, on #IndependenceDay pic.twitter.com/lO3SRCM7kZ
— ANI (@ANI) August 15, 2023
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣ – ನಮ್ಮ ವ್ಯವಸ್ಥೆಗಳನ್ನು ನಾಶಪಡಿಸುವ, ರಾಷ್ಟ್ರದ ಪ್ರಗತಿಗೆ ಅಡ್ಡಿಪಡಿಸುವ ಈ ಮೂರು ದುಷ್ಟರ ವಿರುದ್ಧ ನಾವು ಹೋರಾಡಬೇಕಾಗಿದೆ. ಇದರಿಂದ ದೇಶವನ್ನು ಮುಕ್ತಗೊಳಿಸುವುದು ನನ್ನ ಧ್ಯೇಯವಾಗಿದೆ. ಇದು ನಮ್ಮ ಧ್ಯೇಯವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ದೇಶವನ್ನು ಮುಂದೆ ಕೊಂಡೊಯ್ಯುವ ಒಂದು ವಿಷಯವೆಂದರೆ ಮಹಿಳಾ ನೇತೃತ್ವದ ಅಭಿವೃದ್ಧಿ. ಇಂದು, ಭಾರತವು ನಾಗರಿಕ ವಿಮಾನಯಾನದಲ್ಲಿ ಗರಿಷ್ಠ ಸಂಖ್ಯೆಯ ಮಹಿಳಾ ಪೈಲಟ್‌ಗಳನ್ನು ಹೊಂದಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಮಹಿಳಾ ವಿಜ್ಞಾನಿಗಳು ಚಂದ್ರಯಾನ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ. G20 ರಾಷ್ಟ್ರಗಳು ಸಹ ಮಹಿಳಾ ನೇತೃತ್ವದ ಅಭಿವೃದ್ಧಿಯ ಮಹತ್ವವನ್ನು ಗುರುತಿಸುತ್ತಿವೆ ಎಂದರು.
ಸಾಂಪ್ರದಾಯಿಕ ಕೌಶಲ್ಯ ಹೊಂದಿರುವವರಿಗೆ ಮುಂದಿನ ತಿಂಗಳಲ್ಲಿ 13,000 ರಿಂದ 15,000 ಕೋಟಿ ರೂ.ಗಳ ಹಂಚಿಕೆಯೊಂದಿಗೆ ವಿಶ್ವಕರ್ಮ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲಿದೆ ಎಂದ ಪ್ರಧಾನಿ ಕೊರೋನಾ ಸಂಕಷ್ಟದಲ್ಲಿಯೂ ಭಾರತವು ಹಣದುಬ್ಬರವನ್ನು ಪರಿಣಾಮಕಾರಿಯಾಗಿ ಎದುರಿಸಿದೆ. ಮುಂದಿನ 25 ವರ್ಷಗಳಲ್ಲಿ ಏಕತೆಯ ಮಂತ್ರದೊಂದಿಗೆ ಮುನ್ನಡೆದು ದೇಶವನ್ನು ವಿಶ್ವದಲ್ಲೇ ಒಂದನೇ ಸ್ಥಾನಕ್ಕೇರಿಸಬೇಕು ಎಂದು ಕರೆ ನೀಡಿದರು.
ಮಣಿಪುರದ ಬಗ್ಗೆ ಮಾತನಾಡಿದ ಮೋದಿ, ಮಣಿಪುರದ ಪರಿಸ್ಥಿತಿ ಸುಧಾರಿಸುತ್ತಿದೆ, ಮಣಿಪುರದ ಜನರೊಂದಿಗೆ ಭಾರತ ನಿಂತಿದೆ ಎಂದ ಅವರು, ಸರಣಿ ಸ್ಫೋಟಗಳ ಯುಗ ಮುಗಿದಿದೆ ಮತ್ತು ಇಂದು ದೇಶದಲ್ಲಿ ಭಯೋತ್ಪಾದಕ ದಾಳಿಗಳಲ್ಲಿ ಇಳಿಮುಖವಾಗಿದೆ ಎಂದರು.