ಯೇಸುಕ್ರಿಸ್ತನ ಜೀವನ ಸಂದೇಶ ಮತ್ತು ಮೌಲ್ಯಗಳನ್ನು ನೆನಪಿಸುವ ಕ್ರಿಸ್‌ಮಸ್‌ ಪವಿತ್ರ ದಿನ: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ (ಡಿಸೆಂಬರ್ 25) ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಕ್ರೈಸ್ತ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಈ ಸಂದರ್ಭದಲ್ಲಿ ಅವರು ಎಲ್ಲರಿಗೆ ಶುಭಾಶಯಗಳನ್ನು ಕೋರಿದರು.

ಪ್ರಧಾನಿ ನಿವಾಸ 7, ಲೋಕ ಕಲ್ಯಾಣ ಮಾರ್ಗದಲ್ಲಿ ಅಲ್ಪಸಂಖ್ಯಾತ ಸಮಿತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ಕ್ರಿಸ್‌ಮಸ್ ಸಂದರ್ಭದಲ್ಲಿ ವಿಶ್ವದ ಜನರಿಗೆ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ನನ್ನ ಶುಭಾಶಯಗಳು. ಇಂತಹ ವಿಶೇಷ ಮತ್ತು ಪವಿತ್ರ ದಿನದಂದು ನೀವೆಲ್ಲರೂ ನನ್ನ ನಿವಾಸಕ್ಕೆ ಬಂದಿರುವುದು ನನಗೆ ಸಂತೋಷವಾಗಿದೆ” ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಅವರು ಕ್ರಿಶ್ಚಿಯನ್ ಸಮುದಾಯದೊಂದಿಗೆ ತಮ್ಮ “ಹಳೆಯ ಮತ್ತು ನಿಕಟ” ಬಾಂಧವ್ಯವದ ನೆನಪನ್ನು ಹಂಚಿಕೊಂಡರು ಮತ್ತು ಅಕ್ಟೋಬರ್ 2021 ರಲ್ಲಿ ವ್ಯಾಟಿಕನ್ ನಗರದಲ್ಲಿ ಹೋಲಿ ಪೋಪ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು.

ಕ್ರಿಸ್‌ಮಸ್‌ನ ಮೌಲ್ಯವನ್ನು ಎತ್ತಿ ತೋರಿದ ಅವರು ಇದು ಯೇಸುಕ್ರಿಸ್ತನ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶವಾಗಿದೆ. ಕ್ರಿಸ್ಮಸ್ ನಾವು ಯೇಸುಕ್ರಿಸ್ತನ ಜನ್ಮವನ್ನು ಆಚರಿಸುವ ದಿನ; ಯೇಸುಕ್ರಿಸ್ತನ ಜೀವನ ಸಂದೇಶಗಳು ಮತ್ತು ಮೌಲ್ಯಗಳನ್ನು ನೆನಪಿಟ್ಟುಕೊಳ್ಳಲು ಇದು ಒಂದು ಅವಕಾಶವಾಗಿದೆ. ಸರ್ಕಾರವಾಗಿ, ಅಭಿವೃದ್ಧಿಯ ಪ್ರಯೋಜನಗಳು ಎಲ್ಲರಿಗೂ ತಲುಪುವಂತೆ ನಾವು ಖಚಿತಪಡಿಸುತ್ತೇವೆ ಮತ್ತು ಯಾರೂ ಇದರಿಂದ ಹೊರಗುಳಿಯುವುದಿಲ್ಲ. ಇಂದು, ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಪ್ರಯೋಜನಗಳು ಕ್ರಿಶ್ಚಿಯನ್ ಸಮುದಾಯದ ಜನರಿಗೆ, ವಿಶೇಷವಾಗಿ ಬಡವರು ಮತ್ತು ವಂಚಿತರನ್ನು ತಲುಪುತ್ತಿವೆ ಎಂದು ಪ್ರಧಾನಿ ಹೇಳಿದರು.

ಮೀನುಗಾರಿಕೆಯಲ್ಲಿ ತೊಡಗಿರುವ ಕ್ರಿಶ್ಚಿಯನ್ ಸಮುದಾಯದವರು ಸರ್ಕಾರದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಂಡ ಅವರು ಸರ್ಕಾರದ ಹಲವು ಯೋಜನೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಪಾಲುದಾರಿಕೆಯ ಅಗತ್ಯತೆಯನ್ನು ಮನವರಿಕೆ ಮಾಡಿದರು.