ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: 2024-25 ರ ಅಂತ್ಯದ ವೇಳೆಗೆ 68 ಲಕ್ಷ ಉದ್ಯೋಗ ಸೃಜನೆ

ನವದೆಹಲಿ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಶನಿವಾರದಂದು ತನ್ನ ಎರಡನೇ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿದೆ. 2024-25ರ ಅಂತ್ಯದ ವೇಳೆಗೆ ಈ ಯೋಜನೆಯು 68 ಲಕ್ಷ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ. ಮೀನುಗಾರಿಕೆ ವಲಯವು 2019-20 ರಿಂದ 2021-22 ರವರೆಗೆ 14.3 ಶೇಕಡಾದಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ತೋರಿಸಿದೆ.

2021-22ರಲ್ಲಿ ಮೀನಿನ ಉತ್ಪಾದನೆಯು ಸಾರ್ವಕಾಲಿಕ ಗರಿಷ್ಠ 161.87 ಲಕ್ಷ ಟನ್‌ಗಳನ್ನು ತಲುಪಿದೆ. ಮುಖ್ಯವಾಗಿ ಸಿಗಡಿ ರಫ್ತು ಪ್ರಾಬಲ್ಯ ಹೊಂದಿರುವ ಈ ವಲಯವು 57 ಸಾವಿರದ 587 ಕೋಟಿ ರೂಪಾಯಿಗಳ ಮೊತ್ತದ 13.64 ಲಕ್ಷ ಟನ್‌ ಗಳ ಸಾರ್ವಕಾಲಿಕ ಗರಿಷ್ಠ ರಫ್ತನ್ನು ಕಂಡಿದೆ. ಪಿಎಂಎಂಎಸ್‌ವೈ ದೇಶಾದ್ಯಂತ 31.47 ಲಕ್ಷ ರೈತರಿಗೆ ವಿಮಾ ರಕ್ಷಣೆ ನೀಡಿದೆ.

ಮೀನುಗಾರಿಕೆ ಇಲಾಖೆ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ನವದೆಹಲಿಯಲ್ಲಿ ಎರಡನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಸಚಿವ ಪುರುಷೋತ್ತಮ ರೂಪಾಲಾ ಮುಖ್ಯ ಅತಿಥಿಯಾಗಿದ್ದರು. ಈ ಎರಡು ವರ್ಷಗಳಲ್ಲಿ ಯೋಜನೆಯ ಸಾಧನೆಗಳ ಕುರಿತ ಕಿರುಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಮೀನುಗಾರಿಕೆ, ಪಶುಸಂಗೋಪನೆ ರಾಜ್ಯ ಸಚಿವ ಎಲ್.ಮುರುಗನ್ ಉಪಸ್ಥಿತರಿದ್ದರು.