ಇನ್ನು5 ವರ್ಷಗಳಲ್ಲಿ ಭಾರತದಲ್ಲಿ ಪ್ಲಂಬರ್, ಎಲೆಕ್ಟ್ರೀಶನ್,ಬ್ಲೂ ಕಾಲರ್ ಉದ್ಯೋಗಿಗಳು ಸಿಗೋದೇ ಕಷ್ಟ: ತಜ್ಞರ ಅಧ್ಯಯನ ಬಿಚ್ಚಿಟ್ಟ ಸತ್ಯವೇನು?

ನವದೆಹಲಿ: ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್‌ಗಳು, ಕಾರ್ಪೆಂಟರ್‌ಗಳು, ಚಾಲಕರು, ನರ್ಸ್‌ಗಳು ಹಾಗೂ ಆರೈಕೆ ಸಿಬ್ಬಂದಿಗಳಂತಹ ಬ್ಲೂ-ಕಾಲರ್ (Blue-Collar) ಉದ್ಯೋಗಿಗಳ ತೀವ್ರ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ಭಾರತೀಯ ಕೌಶಲ್ಯಯುತ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗುತ್ತಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಕೆನಡಾ ಮೂಲದ ಮ್ಯಾಕ್ರೋ ಟ್ರೆಂಡ್ಸ್ ಸಂಶೋಧನಾ ಸಂಸ್ಥೆ ಪೈನ್‌ಟ್ರೀ ಸಂಸ್ಥಾಪಕ ರಿತೇಶ್ ಜೈನ್ Ritesh Jain ಅವರು ಈ ಕುರಿತು ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಬರೆದಿರುವ ಪೋಸ್ಟ್‌ನಲ್ಲಿ, “ಭಾರತದಲ್ಲಿ ಎಂಜಿನಿಯರ್‌ಗಳಿಗಿಂತ ಮೊದಲು ಪ್ಲಂಬರ್‌ಗಳ ಕೊರತೆ ಉಂಟಾಗಬಹುದು” ಎಂದು ಎಚ್ಚರಿಸಿದ್ದಾರೆ.

ಅವರ ಪ್ರಕಾರ, ಜಾಗತಿಕ ಮಟ್ಟದಲ್ಲಿ ಬ್ಲೂ-ಕಾಲರ್ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದರೆ, ವೈಟ್-ಕಾಲರ್ (White-Collar) ಉದ್ಯೋಗಿಗಳ ಪೂರೈಕೆ ಹೆಚ್ಚಾಗುತ್ತಿದೆ. ಇದರಿಂದ ಭಾರತದಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕಾರ್ಮಿಕರ ಕೊರತೆ

ನಿರ್ಮಾಣ, ನಿರ್ವಹಣೆ, ಆರೋಗ್ಯ ಸೇವೆ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಕೌಶಲ್ಯಯುತ ಕಾರ್ಮಿಕರನ್ನು ಹುಡುಕುವುದು ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸವಾಲಾಗಿದೆ. ಅನುಭವಿಗಳಾದ ಉದ್ಯೋಗಿಗಳು ನಿವೃತ್ತಿಯಾಗುತ್ತಿರುವುದು ಹಾಗೂ ಯುವಕರು ಈ ವೃತ್ತಿಗಳತ್ತ ಕಡಿಮೆ ಆಸಕ್ತಿ ತೋರುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಯುರೋಫಿಯನ್ ಯೂನಿಯನ್ European Union ಸಮೀಕ್ಷೆಯ ಪ್ರಕಾರ, 2023ರಲ್ಲಿ ಸುಮಾರು 75% ಕಂಪನಿಗಳು ಸೂಕ್ತ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕಷ್ಟಪಟ್ಟಿವೆ. Germanyನಲ್ಲಿ 2024ರಲ್ಲಿ 80% ಕ್ಕೂ ಹೆಚ್ಚು ಉದ್ಯೋಗದಾತರು ನೇಮಕಾತಿ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ. ಎಲೆಕ್ಟ್ರಿಷಿಯನ್‌ಗಳು, ವೆಲ್ಡರ್‌ಗಳು, ಮೆಕ್ಯಾನಿಕ್‌ಗಳು ಮತ್ತು HVAC ತಂತ್ರಜ್ಞರು ಯುರೋಪಿನಲ್ಲಿ ಅತ್ಯಂತ ಬೇಡಿಕೆಯ ವೃತ್ತಿಗಳಾಗಿವೆ.

ಭಾರತದಲ್ಲಿ ಅಸಮತೋಲನದ ಆತಂಕ

“ಮುಂದಿನ ಐದು ವರ್ಷಗಳಲ್ಲಿ ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್‌ಗಳು, ಕಾರ್ಪೆಂಟರ್‌ಗಳು, ಚಾಲಕರು, ನರ್ಸ್‌ಗಳು ಮತ್ತು ಆರೈಕೆ ಸಿಬ್ಬಂದಿಗಳ ಕೊರತೆ ಭಾರತದಲ್ಲಿ ಕಾಣಿಸಿಕೊಳ್ಳಬಹುದು. ಏಕೆಂದರೆ ಹೆಚ್ಚಿನ ಆದಾಯದ ರಾಷ್ಟ್ರಗಳು ಇವರನ್ನು ಆಕರ್ಷಕ ವೇತನದೊಂದಿಗೆ ತಮ್ಮ ದೇಶಗಳಿಗೆ ಕರೆಸಿಕೊಳ್ಳುತ್ತಿವೆ” ಎಂದು ರಿತೇಶ್ ಜೈನ್ ಹೇಳಿದ್ದಾರೆ.

ಅವರು ವ್ಯಂಗ್ಯವಾಗಿ, “ಭಾರತದಲ್ಲಿ ಉದ್ಯೋಗವಿಲ್ಲದ ವೈಟ್-ಕಾಲರ್ ಪದವೀಧರರು ಉಳಿಯಬಹುದು. ಅವರ ಕೌಶಲ್ಯಗಳಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೂ ಸಾಕಷ್ಟು ಬೇಡಿಕೆ ಇಲ್ಲದಿರಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನಸಂಖ್ಯಾ ಬದಲಾವಣೆಗಳ ಪರಿಣಾಮ

ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ವೃದ್ಧ ಜನಸಂಖ್ಯೆ ಹಾಗೂ ಕುಗ್ಗುತ್ತಿರುವ ಕಾರ್ಯನಿರತ ವಯೋಮಾನದ ಜನಸಂಖ್ಯೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದ ಆರೋಗ್ಯ, ಆರೈಕೆ ಹಾಗೂ ಸಾಮಾಜಿಕ ಕಲ್ಯಾಣ ವ್ಯವಸ್ಥೆಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಈ ಕೊರತೆಯನ್ನು ತುಂಬಲು ಭಾರತೀಯ ಬ್ಲೂ-ಕಾಲರ್ ಕಾರ್ಮಿಕರ ಮೇಲೆ ಅವಲಂಬನೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪದವೀಧರರಿಗೆ ಉದ್ಯೋಗ ಸವಾಲು

ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಯುವಕರು ಪದವಿ ಪಡೆದು ಹೊರಬರುತ್ತಿದ್ದರೂ, ವೈಟ್-ಕಾಲರ್ ಉದ್ಯೋಗ ಮಾರುಕಟ್ಟೆ ಈಗಾಗಲೇ ಒತ್ತಡದಲ್ಲಿದೆ. ವಿವಿಧ ಅಧ್ಯಯನಗಳ ಪ್ರಕಾರ, ಯುವ ಪದವೀಧರರ ನಿರುದ್ಯೋಗ ಪ್ರಮಾಣ ಸುಮಾರು 40% ರಷ್ಟಿದೆ. ಕಾರ್ಮಿಕ ಮಾರುಕಟ್ಟೆಗೆ ಪ್ರವೇಶಿಸುವ ಪ್ರತೀ 14 ಪದವೀಧರರಲ್ಲಿ ಒಬ್ಬರಿಗೆ ಮಾತ್ರ ಮೊದಲ ವರ್ಷದಲ್ಲೇ ಶಾಶ್ವತ ಸಂಬಳದ ಉದ್ಯೋಗ ಸಿಗುತ್ತಿದೆ ಎಂದು ಅಂದಾಜಿಸಲಾಗಿದೆ.

ಇನ್ನೊಂದೆಡೆ, ಮುಂದಿನ ದಶಕದಲ್ಲಿ ಭಾರತದಲ್ಲಿ ನಿರ್ಮಾಣ, ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಮೂಲಭೂತ ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಆದರೆ ಕಡಿಮೆ ವೇತನ, ಸುರಕ್ಷತೆಯ ಕೊರತೆ ಮತ್ತು ಅನೌಪಚಾರಿಕ ಉದ್ಯೋಗ ವ್ಯವಸ್ಥೆಗಳ ಕಾರಣದಿಂದ ಯುವಕರು ಈ ವೃತ್ತಿಗಳತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂಬುದು ವರದಿಗಳ ಅಭಿಪ್ರಾಯವಾಗಿದೆ.