ಸಹಜ ಭಕ್ತಿಗೆ ಒಲಿಯುತ್ತಾನೆ ಪಿಲಾರ್ ಖಾನದ ಶಿವ : ಕಾಡ ನಡುವೆ ಕಾಡುವ ಈ ಶಿವಮಂದಿರಕ್ಕೊಮ್ಮೆ ಬನ್ನಿ

ಇಲ್ಲಿನ ದೇವರಿಗೆ ಆಡಂಭರವಿಲ್ಲ. ಸಿಂಗಾರದ ಹೊರೆಯಿಲ್ಲ, ಬಂಗಾರ ವೈಢೂರ್ಯಗಳ ಹಂಗು ಮೊದಲೇ ಇಲ್ಲ. ಕಾಡಿನ ನೀರವದಲ್ಲಿ ಹಸಿರಿನ ಉನ್ಮತ್ತ ನಗುವಿನ ಮದ್ಯೆ ನಿರಾಡಂಬರವಾಗಿ ಕೂತ ಮಹಾಲಿಂಗೇಶ್ವರ ದೇವರು ಕಾಡ ಜೀವಗಳನ್ನು ಪೊರೆಯುತ್ತಲೋ, ಅವರ ಭಕ್ತಿ ಭಾವಗಳಿಗೆ ಸಂತುಷ್ಟನಾಗುತ್ತಲೋ ಕೂತ ಪರಿಯೇ ನೋಡಲು ಚೆಂದ. ಮನಸ್ಸು ಶಾಂತವಾಗಲು ಇಲ್ಲಿಗೊಮ್ಮೆ ಬರಬೇಕು.

ಇದು ಶಿವನ ತಾಣ

 ಕಾರ್ಕಳ ತಾಲೂಕಿನ ಮುದರಂಗಡಿ ಗ್ರಾಮದ ಪಿಲಾರ್‌ಖಾನ ಎಂಬಲ್ಲಿ ಕಾಡಿನ ಸೆರಗಲ್ಲಿರುವ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಬಂದರೆ ಮನ ಭಕ್ತಿಯ ಸಡಗರದಲ್ಲಿ ಕಳೆದು ಹೋಗುತ್ತದೆ. ಸುಮಾರು ೨೫೦೦ ವರ್ಷದಷ್ಟು ಹಳೆಯದಾದ ಈ ದೇವಸ್ಥಾನದ ಒಳ ಹೊಕ್ಕುತ್ತಿದ್ದಂತೆಯೇ ಬದುಕಿನ ಯಾವುದೋ ಅಪೂರ್ವ ತಾಣಕ್ಕೆ ಬಂದಂತಹ ಅನುಭೂತಿ. ಹಳೆಯ ದಿನಗಳಿಗೆ ಮತ್ತೆ ಮರಳಿಬಿಟ್ಟೆನೇನೋ ಎನ್ನುವ ಪ್ರಸನ್ನ ಧನ್ಯತೆ. ಭಾರ್ಗವ ಎನ್ನುವ ಋಷಿ, ಈ ಪಿಲಾರ್ ಖಾನದ ದಟ್ಟ ಕಾಡಿನಲ್ಲಿ ಎಷ್ಟೋ ವರ್ಷ ಸುಧೀರ್ಘ ತಪಸ್ಸನ್ನಾಚರಿಸಿದ ಅನಂತರ ಈ ದೇವಸ್ಥಾನವನ್ನು ಕಟ್ಟಿಸಿದ ಎನ್ನುವುದು ಈ ದೇವಸ್ಥಾನದ ಕುರಿತು ಸಿಗುವ ಮಾಹಿತಿ. ಅಂದ ಹಾಗೆ ತುಳುವಿನಲ್ಲಿ ಖಾನ ಎಂದರೆ ಕಾಡು. ಇಲ್ಲಿ ದಟ್ಟವಾದ ಕಾಡಿರುವುದರಿಂದಲೇ ಪಿಲಾರ್ ಜೊತೆ ಖಾನ ಎನ್ನುವ ಹೆಸರೂ ಬಂತಂತೆ. ಮಹಾಲಿಂಗೇಶ್ವರ ದೇವರಿಗೆ ಈ ದೇವಸ್ಥಾನದಲ್ಲಿ ಅಗ್ರಪೂಜೆ. ಇದರ ಜೊತೆಯಲ್ಲಿಯೇ ಸುತ್ತಿನಲ್ಲಿರುವ ಮಹಾಗಣಪತಿ ದೇವರಿಗೂ ನಿತ್ಯ ಪೂಜೆ ಜರುಗುತ್ತದೆ.

ಕಾಡುವ ದೇವಸ್ಥಾನ:

ದೇವರ ಮುಂದಿರುವ ನಂದಿ ನೋಡುತ್ತಿದ್ದಂತೆಯೇ ಹಳೆ ಕಾಲದ ಒನಪು ವಯ್ಯಾರಕ್ಕೆ ಅದೆಷ್ಟು ಚೆಲುವಿತ್ತೆಂದು ಅರ್ಥವಾಗುತ್ತದೆ. ಅಂತಹ ಯಾವುದೇ ಕೃತಕ ಬೆಳಕಿಲ್ಲದೇ ಬರೀ ದೀಪದ ಬೆಳಕಿನಿಂದಲೇ ಕಾಣುವ ಮಹಾಲಿಂಗೇಶ್ವರನ ಸಹಜ ತೇಜೋಮಯ ಗಾಂಭೀರ್ಯ ಸೌಂದರ್ಯ, ಅರೆಕ್ಷಣದಲ್ಲೇ ಭಕ್ತಿಯ ಪರವಶವಾಗುವಂತೆ ಮಾಡುತ್ತದೆ. ಸುತ್ತಲೂ ತುಂಬಿರುವ ಕಾಡು, ಭಕ್ತಿಯ ಏಕತಾನತೆಗೆ ಪೂರಕವಾಗುವುದಷ್ಟೇ ಅಲ್ಲದೇ, ನಿಸರ್ಗ ಪ್ರಿಯರ ಕಣ್ಣಲ್ಲೂ ವಿನಭ್ರ ಭಾವ ಉಕ್ಕಿಸುವುದಂತೂ ಖಂಡಿತ.

ಇಲ್ಲಿ ಪಾತಃ ಕಾಲ ಹಾಗೂ ಮದ್ಯಾಹ್ನ ಪೂಜೆ ಜರುಗುತ್ತದೆ. ಶಿವರಾತ್ರಿಯ ಹೊತ್ತಲ್ಲಿ ಇಲ್ಲಿನ ಸಂಭ್ರಮದ ಜಾತ್ರೆಯನ್ನು ನೋಡುವುದೇ ಚೆಂದ. ಅಂದ ಹಾಗೆ ಈ ದೇವಸ್ಥಾನದ ಇನ್ನೊಂದು ವಿಶೇಷತೆ ಅಂದರೆ ಇಲ್ಲಿ ವಧು ವರರಿಗೆ ಸರಳ ಮದುವೆಯನ್ನೂ ಮಾಡಿಸಲಾಗುತ್ತದೆ. ಈವರೆಗೆ ಏಪ್ಪತ್ತರಷ್ಟು ಸರಳ ವಿವಾಹ ಇಲ್ಲಿ ನಡೆದಿರುವುದು ವಿಶೇಷ ಹಿಂದೊಮ್ಮೆ ಇಲ್ಲಿ ರಷ್ಯಾದ ಜೋಡಿಗಳಿಗೆ ಮದುವೆ ಮಾಡಿಸಿದ್ದೆವು. ಮದುವೆಗೆ ಜಾತಿ, ಧರ್ಮಗಳ ಹಂಗಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕಾಣಿಕೆಯನ್ನು ನೀಡಬಹುದು. ಸರಳವಾಗಿ ವಿವಾಹ ಕಾರ್ಯವನ್ನು ನೆರವೇರಿಸಲಾಗುತ್ತದೆ. ಎನ್ನುವುದು ಇಲ್ಲಿನ ಅರ್ಚಕ ಶ್ರೀನಿವಾಸ ಭಟ್ಟರ ಹೇಳಿಕೆ. ಶಾಂತವಾದ ವಾತವರಣದಲ್ಲಿ ತಾಜಾ ತಾಜಾ ಭಕ್ತಿ ಉಕ್ಕುತ್ತದೆ. ಸರಳತೆ, ಕಾಡಿನ ನೀರವತೆ, ಹಕ್ಕಿಗಳ ಚಿಲಿಚಿಲಿ ಗೋಷ್ಠಿಗಳ ನಡುವೆ ಮನಸ್ಸು ಪ್ರಸನ್ನವಾಗುತ್ತದೆ ಎನ್ನುವ ಮಾತುಗಳನ್ನು ನಂಬುವವರಿಗೆ ಇದು ಸಹಜ ಭಕ್ತಿಯ ಆಡೊಂಬೊಲವಾದೀತು. ಮಹಾಲಿಂಗೇಶ್ವರನದಿಂದ ಇಷ್ಟಾರ್ಥಗಳೂ ಈಡೇರೀತು.

ಎಲ್ಲಿದೆ?

ಉಡುಪಿಯಿಂದ ಉಚ್ಚಿಲ ಮಾರ್ಗವಾಗಿ 15 ಕಿ.ಮೀ ಸಾಗಿದರೆ ಪಿಲರ್ ಖಾನಾ ತಲುಪಬಹುದು. ಕಾರ್ಕಳದಿಂದ ಬೆಳ್ಮಣ್ ಮಾರ್ಗವಾಗಿ ಈ ದೇವಸ್ಥಾನ ತಲುಪಬಹುದು.

-ಪ್ರಸಾದ್ ಶೆಣೈ