ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಪಡೆಯಲು ಪರ್ಮಿಟ್‌ಗಾಗಿ ದೋಣಿ ಮಾಲಕರು ಅರ್ಜಿ ಸಲ್ಲಿಸುವ ಮೊದಲು ಇಲಾಖೆಯಿಂದ ದೋಣಿಗಳ ಭೌತಿಕ ಪರಿಶೀಲನೆ ನಡೆಸಿ, ಪರವಾನಿಗೆಯನ್ನು ದೋಣಿ ಮಾಲಕರಿಗೆ ನೀಡಲಾಗುವುದು.
ಮೋಟಾರೀಕೃತ ನಾಡದೋಣಿಗಳ ಮೀನುಗಾರಿಕಾ ಸೀಮೆ ಎಣ್ಣೆ ರಹದಾರಿ ನವೀಕರಣ ಹಾಗೂ ಹೊಸದಾಗಿರುವ ದೋಣಿಗಳಿಗೆ ಸೀಮೆಎಣ್ಣೆ ಪೂರೈಸುವ ಸಂಬಂಧ ಪರವಾನಿಗೆಯನ್ನು ನೀಡಲು ಅವರ ದೋಣಿಗಳನ್ನು ಭೌತಿಕ ತಪಾಸಣೆಗೆ ಒಳಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಗಸ್ಟ್ 23 ರಂದು ಬೈಂದೂರು ತಾಲೂಕಿನ ಅಳ್ವೆಗದ್ದೆಯ ಮೀನುಗಾರಿಕೆ ಜೆಟ್ಟಿ, ಕಳಿಹಿತ್ಲುವಿನ ಮೀನುಗಾರಿಕೆ ಹರಾಜು ಪ್ರಾಂಗಣ, ಮಡಿಕಲ್‌ನ ಮಹೇಶ್ವರ ದೇವಸ್ಥಾನ, ಪಡುವರಿ /ತಾರಾಪತಿಯ ಶ್ರೀ ರಾಮ ಮಂದಿರ, ಕೊಡೇರಿ ಬಂದರು, ಮರವಂತೆ ಬಂದರು, ಕಂಚುಕೋಡು ಮಡಿ, ಗಂಗೊಳ್ಳಿ ಲೈಟ್‌ಹೌಸ್, ಗಂಗೊಳ್ಳಿ ಬಂದರು, ಮತ್ತು ಕೋಡಿ ಕಿನಾರೆ ಹಾಗೂ ಆಗಸ್ಟ್ 25
ರಂದು ಪಲಿಮಾರು ಮೀನುಗಾರರ ಸಭಾ ಭವನ ಬಳಿ, ಉಚ್ಚಿಲ ಸುಬಾಷ್ ರೋಡ್ ಬೀಚ್ ಹತ್ತಿರ, ಮಲ್ಪೆ-ಪಡುಕೆರೆ ಬೋಟ್ ಕಚ್ಚೇರಿ ಹತ್ತಿರ, ಮಲ್ಪೆ-ಕೊಳ ಹನುಮಾನ್ ವಿಠೋಭ ಮಂದಿರ ಮುಂಬಾಗ, ಸಾಸ್ತಾನ ಕೋಡಿ ಜೆಟ್ಟಿ, ಕಾಪು ಲೈಟ್‌ಹೌಸ್, ಎರ್ಮಾಳ್ (ಉಚ್ಚಿಲ ಅಥವಾ ಕಾಪು), ಕೋಡಿಬೆಂಗ್ರೆ ಸ್ಥಳಗಳಲ್ಲಿ ಮೀನುಗಾರಿಕಾ ದೋಣಿಗಳ ತಪಾಸಣೆ ಕೈಗೊಳ್ಳಲಾಗುವುದು.
ದೋಣಿ ಮಾಲಕರು ತಮ್ಮ ದೋಣಿಗಳನ್ನು ಆರ್.ಸಿ ಪ್ರತಿಯೊಂದಿಗೆ ನಿಗದಿಪಡಿಸಿದ ಸ್ಥಳದಲ್ಲಿ ಹಾಜರುಪಡಿಸಿ ನೋಂದಣಿ ಪತ್ರದಲ್ಲಿರುವಂತೆ ನೋಂದಣಿ ನಂಬರ್ ಮತ್ತು ದೋಣಿ ಹೆಸರು, ದೋಣಿ ಮೇಲೆ ಪೈಂಟ್ ಮಾಡಿ ಪ್ರದರ್ಶಿಸಬೇಕು, ಸ್ಟಿಕ್ಕರ್ ಅಳವಡಿಸಿರಬಾರದು ಹಾಗೂ ಇಂಜಿನ್ ಅನ್ನು ತಪಾಸಣೆಗೆ ಒಳಪಡಿಸಬೇಕು.
ಪರವಾನಿಗೆ ಪಡೆದ ದೋಣಿ ಮಾಲಕರು ಸೇವಾಸಿಂಧು ಪೋರ್ಟಲ್‌ನಲ್ಲಿ ಸೀಮೆಎಣ್ಣೆ ಪರ್ಮಿಟ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.