ಉಡುಪಿ: ಕೃತಕ ಬುದ್ಧಿಮತ್ತೆ (ಎಐ) ಈ ಯುಗದ ದೊಡ್ಡ ಜ್ಞಾನಿಯಾಗಿದ್ದು, ಅದು ನಮಗೆ ವಿನಮ್ರತೆಯನ್ನು ಕಲಿಸಿಕೊಡುತ್ತದೆ. ಫೋಟೋಗ್ರಫಿ ಕ್ಷೇತ್ರದಲ್ಲಿ ಎಐ ಸದ್ಯ ಬಂಧನದಂತೆ ಕಂಡರೂ ಅದನ್ನು ಮೀರಿದಾಗ ನಂದನವಾಗಲಿದೆ ಎಂದು ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್‌ನ ಪ್ರೊಫೆಸರ್ ಸತ್ಯಬೋಧ ಜೋಶಿ ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದಲ್ಲಿ ಬುಧವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಸದಸ್ಯರ ಸುದ್ದಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ‘ಡಿಜಿಟಲ್-ಎಐ ಅಡಕತ್ತರಿಯಲ್ಲಿ ಛಾಯಾಗ್ರಹಣ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಫೋಟೋಗ್ರಫಿಯಲ್ಲಿ ಹೊಸ ತಂತ್ರಜ್ಞಾನಗಳ ಆಗಮನವು ಹೊಸ ಜವಾಬ್ದಾರಿಯನ್ನು ನೀಡುತ್ತಿದೆ. ಎಐ ಕೂಡ ಹೊಸತನ್ನು ಕಲಿಯುವ ಸವಾಲನ್ನು ಮುಂದಿಟ್ಟಿದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಅನುಕೂಲಗಳೇ ಹೆಚ್ಚಾಗಲಿವೆ. ಎಐ 10 ಹೆಜ್ಜೆ ಮುಂದಿಟ್ಟರೆ ನಾವು 100 ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ. ಇದೇ ನಮ್ಮ ಮುಂದಿರುವ ಸವಾಲು ಎಂದರು.

ಎಐ ಮೂಲಕ ಕಡಿಮೆ ವೆಚ್ಚದಲ್ಲಿ ದೊರೆಯುತ್ತಿರುವ ತಂತ್ರಜ್ಞಾನದ ಹಿಂದೆ ದೊಡ್ಡ ಬಂಡವಾಳವಿದೆ. ಮುಂದಿನ ಹಂತ ತಲುಪಿದಂತೆ ಈ ತಂತ್ರಜ್ಞಾನ ದುಬಾರಿಯಾಗುವ ಸಾಧ್ಯತೆಯೂ ಇದೆ. ಯಾವುದೇ ತಂತ್ರಜ್ಞಾನ ಬಂದರೂ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ.
ನಿರಂತರ ಪ್ರಯತ್ನದಿಂದ ಗಳಿಸಿದ ಕೌಶಲ್ಯ ಮಾತ್ರ ಗಟ್ಟಿಯಾಗಿ ಉಳಿಯಲು ಸಾಧ್ಯ. ಇದು ಛಾಯಾಗ್ರಹಣ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಣಿಪಾಲ ಮಾಹೆಯ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ನಿರ್ದೇಶಕ ಭರತ್ ಕುಮಾರ್ ಮಾತನಾಡಿ, ಛಾಯಾಗ್ರಹಣ ಕಾಲಚಕ್ರವನ್ನು ಒಂದು ಕ್ಷಣ ತಡೆದು ನಿಲ್ಲಿಸುವ ಪ್ರಕ್ರಿಯೆ. ಹೊಸ ತಂತ್ರಜ್ಞಾನಗಳು ಬಂದರೂ ಫೋಟೋಗ್ರಫಿಯ ಮೂಲತತ್ವ ಬದಲಾಗಿಲ್ಲ. ಅದು ಕತ್ತಲಿನಿಂದ ಬೆಳಕಿಗೆ ಬರುವ ಕ್ರಿಯೆ ಎಂದರು.
ಛಾಯಾಗ್ರಹಣ ಹಾಗೂ ಪತ್ರಿಕೋದ್ಯಮಕ್ಕೆ ವೃತ್ತಿ ಸಂಹಿತೆ ಇದೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನೆ ಮನುಷ್ಯನಲ್ಲಿ ಇರುತ್ತದೆಯೇ ಹೊರತು ಯಂತ್ರದಲ್ಲಿ ಇರುವುದಿಲ್ಲ. ಹೀಗಾಗಿ ತಂತ್ರಜ್ಞಾನ ಬಳಸುವವರು ವೃತ್ತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಂಕಿತ್ ಶೆಟ್ಟಿ, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಸಮಿತಿ ಸದಸ್ಯ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ಆರಾಡಿ ವಂದಿಸಿದರು.















