ಪ್ರೆಸ್ಟೀಜ್ ಫಾಲ್ಕನ್ ಸಿಟಿ- ಕರಾವಳಿ ಕೂಟ ವತಿಯಿಂದ ಪ್ರಪ್ರಥಮ ನಮ್ಮ ಕರಾವಳಿ ಉತ್ಸವ ಆಯೋಜನೆ: ರಾಜ್ಯ ರಾಜಧಾನಿಯಲ್ಲಿ ತುಳುನಾಡ ಕಲರವ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಅಂಗವಾಗಿ, ಇಲ್ಲಿನ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಕರಾವಳಿ ಪ್ರದೇಶದ ನಿವಾಸಿಗಳ ಗುಂಪು “ನಮ್ಮ ಕರಾವಳಿ ಉತ್ಸವ” ಆಚರಿಸಿ ಕರಾವಳಿಯ ಕಂಪನ್ನು ರಾಜ್ಯಧಾನಿಯಲ್ಲೂ ಪಸರಿಸಿದೆ. ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ 2500 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಭಾರತದ ವಿವಿಧ ಭಾಗಗಳಿಂದ 5000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇದರಲ್ಲಿ ಸುಮಾರು 350 ಕ್ಕೂ ಹೆಚ್ಚು ಜನರು ಕರಾವಳಿ ಪ್ರದೇಶದವರು.

ಕರಾವಳಿಯ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ, ಉತ್ತೇಜಿಸುವ ಮತ್ತು ಆಚರಿಸುವ ಗುರಿಯೊಂದಿಗೆ, ಈ ಕರಾವಳಿ ನಿವಾಸಿಗಳು ಒಗ್ಗೂಡಿ “PFC ಕರಾವಳಿ ಕೂಟ” ವನ್ನು ರಚಿಸಿದ್ದು, ಮೊಟ್ಟಮೊದಲ ಬಾರಿಗೆ 3 ದಿನದವರೆಗೆ ನಮ್ಮ ಕರಾವಳಿ ಉತ್ಸವವನ್ನು ಆಯೋಜಿಸಿದ್ದು ಈ ಹಿಂದೆ ಈ ರೀತಿಯ ದೊಡ್ಡ ಪ್ರಮಾಣದ ಕಾರ್ಯಕ್ರಮ ಯಾವುದೇ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ನಡೆದಿಲ್ಲ.

ಇದು ಊರಿನ ಬೇರುಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಮತ್ತು ಯುವ ಪೀಳಿಗೆಗೆ ಕರಾವಳಿಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲು ಒಂದು ಅವಕಾಶವಾಗಿದೆ.

ಮಂಗಳೂರು ಮತ್ತು ಉಡುಪಿ ಭಾಗದಿಂದ 125ಕ್ಕೂ ಹೆಚ್ಚು ಕಲಾವಿದರು ಆಗಮಿಸಿ ಕರಾವಳಿಯ ಸಂಸ್ಕೃತಿಯ ಪರಿಚಯ ನೀಡಿದರು.

ಗಣಪತಿ ಪೂಜೆ, ಊಡು ಪೂಜೆ, ಚೌಕಿ ಪೂಜೆ ಸೇರಿದಂತೆ ಎಲ್ಲಾ ವಿಧಿವಿಧಾನಗಳನ್ನು ಸಂಪ್ರದಾಯದಂತೆ ಅನುಸರಿಸಲಾಯಿತು.

3-ದಿನದ ಭವ್ಯವಾದ ಕಾರ್ಯಕ್ರಮದಲ್ಲಿ ಪ್ರದರ್ಶನ ಕಂಡ ಕಲೆಗಳು

ಹುಲಿ ವೇಷ- ಶ್ರೀ ಮಾರುತಿ ವ್ಯಾಯಮ ಶಾಲೆ, ಮಂಗಳೂರು
ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ- ಸನಾತನ ಯಕ್ಷಾಲಯ(ರಿ), ಮಂಗಳೂರು
ಚೆಂಡೆ ಮೇಳ-ಶ್ರೀ ಮಹಾಗಣಪತಿ ಚೆಂಡೆ, ಉಡುಪಿ
ತಟ್ಟಿರಾಯ-ಚಿಲಿಪಿಲಿ ಗೊಂಬೆ ಬಳಗ, ಬಂಟ್ವಾಳ
ದೈವದ ಕೊಡಿಯಡಿ ಪ್ರದರ್ಶನ-ಕೌಶಾಲ್ಯ ಮೆಟಲ್ ಕ್ರಾಫ್ಟ್ಸ್, ಉಡುಪಿ

ಖ್ಯಾತ ಇತಿಹಾಸಕಾರ, ಲೇಖಕ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಅವರನ್ನು ವಿಶೇಷ ಅತಿಥಿಯಾಗಿ ಸನ್ಮಾನಿಸಲಾಯಿತು. ಬಳಿಕ ಅವರು ತುಳುನಾಡಿನ ವಿವಿಧ ಸಾಂಸ್ಕೃತಿಕ ಅಂಶಗಳ ಬಗ್ಗೆ ತಮ್ಮ ಜ್ಞಾನವನ್ನು ಹಂಚಿಕೊಂಡರು.

ಮಕ್ಕಳಿಗಾಗಿ ಹುಲಿವೇಷ ಕಲಾವಿದರೊಂದಿಗೆ ಸಂವಾದ, ಕರಾವಳಿ ವಿಷಯಗಳ ಮೇಲೆ ಚಿತ್ರಕಲೆ ಸ್ಪರ್ಧೆ, ಛಾಯಾಗ್ರಹಣ, ಭಕ್ತ ಕನಕದಾಸ ಮತ್ತು ಉಡುಪಿ ಕೃಷ್ಣ ಕಥಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕರಾವಳಿಯ ಆಹಾರ ಖಾದ್ಯಗಳಾದ ಚರ್ಮುರಿ, ಗೋಲಿ ಸೋಡಾ, ಗೋಲಿ ಬಜೆ, ಮೀನಿನ ಖಾದ್ಯಗಳನ್ನು ಶೆಟ್ಟಿ ಲಂಚ್ ಹೋಮ್‌ ವತಿಯಿಂದ ಆಯೋಜಿಸಲಾಯಿತು.

ಸುಮಾರು 4000ನಿವಾಸಿಗಳು ಕರಾವಳಿಯ ಸೊಗಡು ಮತ್ತು ಸವಿರುಚಿಯನ್ನು ಆನಂದಿಸಿದರು.