ದೇವಸ್ಥಾನಕ್ಕೂ ಬಂತು ರೋಬೋಟ್ ತಂತ್ರಜ್ಞಾನ: ಕೇರಳದ ದೇವಸ್ಥಾನಕ್ಕೆ ಪೇಟಾ ಸಂಸ್ಥೆಯಿಂದ ಯಾಂತ್ರಿಕ ಆನೆ ಕೊಡುಗೆ

ತ್ರಿಶೂರು: ಇದೇ ಮೊದಲ ಬಾರಿಗೆ, ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀ ಕೃಷ್ಣ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸಲು ಜೀವ ಇರುವಂತೆ ಕಾಣುವ ಯಾಂತ್ರೀಕೃತ ಆನೆಯನ್ನು ಬಳಸಲಾಗಿದ್ದು, ಇದನ್ನು ನಟಿ ಪಾರ್ವತಿ ತಿರುವೋತ್ತು ಅವರ ಬೆಂಬಲದೊಂದಿಗೆ ಪೇಟಾ ಇಂಡಿಯಾ ಸಂಸ್ಥೆಯು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದೆ ಎಂದು ಇಂಡಿಯಾ ಟುಡೇ ವರದಿ ಹೇಳಿದೆ.

ಇರಿಂಜದಪಿಲ್ಲಿ ರಾಮನ್ ಎಂಬ ಹೆಸರಿನ ಯಾಂತ್ರಿಕ ಆನೆಯು ಹತ್ತೂವರೆ ಅಡಿ ಎತ್ತರ ಮತ್ತು 800 ಕೆಜಿ ತೂಕವಿದೆ. ಸುಮಾರು 4 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಆನೆಯ ತಲೆ, ಕಣ್ಣು, ಬಾಯಿ, ಕಿವಿ ಮತ್ತು ಬಾಲ ಎಲ್ಲವೂ ವಿದ್ಯುತ್‌ ಚಾಲಿತವಾಗಿದೆ.

ಆನೆ ಅಥವಾ ಇತರ ಯಾವುದೇ ಪ್ರಾಣಿಗಳನ್ನು ಆಚರಣೆ, ಉತ್ಸವಗಳು ಅಥವಾ ಯಾವುದೇ ಉದ್ದೇಶಕ್ಕಾಗಿ ಎಂದಿಗೂ ಸಾಕಬಾರದು ಅಥವಾ ಬಾಡಿಗೆಗೆ ತೆಗೆದುಕೊಳ್ಳಬಾರದು ಎನ್ನುವ ದೇವಾಲಯದ ಕರೆಯನ್ನು ಅನುಸರಿಸಿ, ಪೇಟಾ ಇಂಡಿಯಾ ಸಂಸ್ಥೆಯು ರೋಬೋಟಿಕ್ ಆನೆಯನ್ನು ನೀಡಿದೆ ಎಂದು ವರದಿ ಹೇಳಿದೆ.

ಭಾನುವಾರ ಇರಿಂಜದಪ್ಪಿಲ್ಲಿ ರಾಮನ್ ನ “ನಡಾಯಿರುತಲ್” (ದೇವರಿಗೆ ಆನೆಗಳನ್ನು ಅರ್ಪಿಸುವ ಸಮಾರಂಭ) ನಡೆಸಲಾಯಿತು.

ಪೇಟಾ ಇಂಡಿಯಾ ತನ್ನ ಹೇಳಿಕೆಯಲ್ಲಿ, “ಸೆರೆಯಲ್ಲಿರುವ ಹತಾಶೆಯು ಆನೆಗಳು ಅಸಹಜ ನಡವಳಿಕೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಪ್ರದರ್ಶಿಸಲು ಕಾರಣವಾಗುತ್ತದೆ. ಹತಾಶೆಗೊಂಡ ಆನೆಗಳು ತಮ್ಮ ಬುದ್ದಿ ಸ್ಥಿಮಿತ ಕಳೆದುಕೊಂಡು ಆಗಾಗ್ಗೆ ಹುಚ್ಚುಚ್ಚಾಗಿ ಓಡುತ್ತವೆ ಮತ್ತು ಮನುಷ್ಯರು, ಇತರ ಪ್ರಾಣಿಗಳು ಹಾಗೂ ಆಸ್ತಿಗೆ ಹಾನಿ ಮಾಡುತ್ತವೆ. ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 15 ವರ್ಷಗಳ ಅವಧಿಯಲ್ಲಿ ಬಂಧಿತ ಆನೆಗಳು ಕೇರಳದಲ್ಲಿ 526 ಜನರನ್ನು ಕೊಂದಿವೆ. ಸುಮಾರು 40 ವರ್ಷಗಳ ಕಾಲ ಸೆರೆಯಲ್ಲಿದ್ದ ಚಿಕ್ಕಟ್ಟುಕಾವು ರಾಮಚಂದ್ರನ್, ಕೇರಳದ ಉತ್ಸವದ ಸಮಯದಲ್ಲಿ ಹೆಚ್ಚಾಗಿ ಬಳಸುವ ಆನೆಗಳಲ್ಲಿ ಒಂದಾಗಿದ್ದು, ಇದು ಆರು ಮಾವುತರನ್ನು, ನಾಲ್ಕು ಮಹಿಳೆಯರು ಮತ್ತು ಮೂರು ಆನೆಗಳ ಸಹಿತ 13 ಜನರನ್ನು ಕೊಂದಿದೆ” ಎಂದು ತಿಳಿಸಿದೆ.

ಆನೆಗಳನ್ನು ಬಳಸುವ ಎಲ್ಲಾ ಸ್ಥಳಗಳು ಮತ್ತು ಕಾರ್ಯಕ್ರಮಗಳಲ್ಲಿ ನೈಜ ಆನೆಗಳ ಬದಲಿಗೆ ಯಾಂತ್ರಿಕ ಆನೆಗಳು ಅಥವಾ ಇತರ ವಿಧಾನಗಳಿಗೆ ಬದಲಾಯಿಸಿಕೊಳ್ಳಲು ಸಂಸ್ಥೆ ವಿನಂತಿಸಿದೆ.

ಕೇರಳದ ದೇವಾಲಯದ ಉತ್ಸವಗಳು ಆನೆಗಳಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದರೆ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದ ಅಧಿಕಾರಿಗಳು ಇತರ ದೇವಾಲಯಗಳು ಕೂಡಾ ತಮ್ಮ ಆಚರಣೆಗಳನ್ನು ನಡೆಸಲು ಜೀವಂತ ಆನೆಗಳನ್ನು ಇತರ ವಿಧಾನಗಳಿಗೆ ಬದಲಾಯಿಸುವುದನ್ನು ನೋಡಬೇಕೆಂದು ಆಶಿಸುತ್ತಿದ್ದಾರೆ ಎನ್ನಲಾಗಿದೆ.