ಹುಲಿ ಕುಣಿತ ಸಂದರ್ಭದಲ್ಲಿ ವೇಷಧಾರಿಯ ಮೈಮೇಲೆ ಆವೇಶ!!

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹುಲಿವೇಷಧಾರಿಯೊಬ್ಬರ ಮೈಮೇಲೆ ಆವೇಶವಾಗಿದೆ. ಹುಲಿಕುಣಿತದ ಸಂದರ್ಭದಲ್ಲಿ ವೇದಿಕೆಯ ಕುಣಿಯುತ್ತಿದ್ದ ಹೊತ್ತಿನಲ್ಲೇ ಮೈಮೇಲೆ ಆವೇಶವಾಗಿರುವ ವಿಡೀಯೋ ವೈರಲ್ ಆಗಿದೆ.

ಬುಧವಾರದಂದು ಕೊರಂಗ್ರಪಾಡಿಯ ಜೂನಿಯರ್ ಫ್ರೆಂಡ್ಸ್ ತಂಡದವರು ನಿಟ್ಟೂರಿನಲ್ಲಿ ವೇದಿಕೆಯ ಮೇಲೆ ಹುಲಿಕುಣಿತ ಪ್ರದರ್ಶಿಸುತ್ತಿದ್ದರು. ಈ ಸಮಯದಲ್ಲಿ ಅಖಿಲೇಶ್ ಎಂಬವರು ಮೈಮೇಲೆ ಆವೇಶಭರಿತರಾಗಿ ವೇದಿಕೆ ಮೇಲೆ ಹಾಕಿದ್ದ ಹಾಸುಗಂಬಳಿಯನ್ನು ಕಚ್ಚಿ ಎಳೆದಿದ್ದಾರೆ. ಆ ಕೂಡಲೇ ಎಚ್ಚೆತ್ತ ತಂಡದವರು ಅವರನ್ನು ಹತೋಟಿಗೆ ತರಲು ಯತ್ನಿಸಿದ್ದಾರೆ ಮತ್ತು ತಾಸೆ ನಿಲ್ಲಿಸಿ ಅವರಿಗೆ ಶೈತ್ಯೋಪಚಾರ ಮಾಡಿದ್ದಾರೆ.

ಕಳೆದ 20 ವರ್ಷಗಳಿಂದ ನಾವು ಹುಲಿವೇಷ ಹಾಕುತ್ತಿದ್ದೇವೆ. ತುಳುನಾಡಿನಲ್ಲಿ ವಿಶೇಷವಾಗಿರುವ ಹುಲಿವೇಷಕ್ಕೆ ವಿಶೇಷ ಸ್ಥಾನಮಾನವಿದೆ. ಈ ವೇಷ ಹಾಕುವುದಕ್ಕೆ ಸಾಕಷ್ಟು ನಿಯಮಾವಳಿಗಳಿವೆ. ನಟ ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಚಿತ್ರದಲ್ಲಿ ನಟಿಸಿದ್ದೇನೆ. ಕಾಂತಾರದಲ್ಲೂ ಬಣ್ಣ ಹಚ್ಚಿದ್ದೇನೆ. ತಮಿಳು ಭಾಷೆಯಲ್ಲಿ ತೆರೆ ಕಂಡ ರಿಚ್ಚಿ ಚಿತ್ರದಲ್ಲೂ ಹುಲಿವೇಷಧಾರಿಯಾಗಿ ನಟಿಸಿದ್ದೇನೆ. ಹುಲಿವೇಷವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ನಿನ್ನೆ ಏನಾಗಿದೆ ಎನ್ನುವುದೇ ನನಗೆ ಗೊತ್ತಿಲ್ಲ, ಕಣ್ಣು ಕತ್ತಲು ಆಗಿತ್ತು. ಮೈ ಕೈಯಲ್ಲಿ ಬೆಂಕಿ ಬಂದಂತಾಗಿ ರೋಮಾಂಚನಗೊಂಡಿದ್ದೆ. ತಾಸೆ ನಿಲ್ಲಿಸಿ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿದ ಬಳಿಕ ಸಮಾಧಾನಗೊಂಡಿದ್ದೇನೆ ಎಂದು ಅಖಿಲೇಶ್ ಹೇಳಿದ್ದಾರೆ.