ಉಡುಪಿ ಜಿಲ್ಲೆಯಲ್ಲಿ ಸೆಲೂನ್ ತೆರೆಯಲು ಅನುಮತಿ ನೀಡಿ: ಭಂಡಾರಿ ಮಹಾಮಂಡಲದಿಂದ ಡಿಸಿಗೆ ಮನವಿ

ಉಡುಪಿ: ರಾಜ್ಯ ಸರ್ಕಾರವು ಘೋಷಿಸಿರುವ 14 ದಿನಗಳ ಕೋವಿಡ್ ಕರ್ಪ್ಯೂನಿಂದ ದಿನದ ಸಂಪಾದನೆಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದ ಕ್ಷೌರಿಕ ವೃತ್ತಿ ಬಾಂಧವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಜಿಲ್ಲೆಯ ಸೆಲೂನ್ (ಕ್ಷೌರದಂಗಡಿ) ಗಳಿಗೆ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ತೆರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಭಂಡಾರಿ ಮಹಾಮಂಡಲದ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದ್ದಾರೆ.

ಕ್ಷೌರದಂಗಡಿಗಳಲ್ಲಿ‌ ಈಗಾಗಲೇ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಪ್ರಕಟಿಸಿರುವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಆದರೂ ಸರ್ಕಾರ ಕ್ಷೌರದಂಗಡಿಗಳನ್ನು ತೆರೆಯಲು ಅನುಮತಿ‌ ನೀಡಿಲ್ಲ. ಇದರಿಂದ ದುಡಿಮೆ ಇಲ್ಲದೆ ಕ್ಷೌರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿತ್ಯದ ಸಂಪಾದನೆಯಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಕ್ಷೌರಿಕ‌ ವೃತ್ತಿದಾರರು ಅಕ್ಷರಶಃ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಹಾಗಾಗಿ ಸರ್ಕಾರವು ಕ್ಷೌರಿಕರ ಸಮಸ್ಯೆಯನ್ನು ಪರಿಗಣಿಸಿ ಇದೀಗ ಕೋವಿಡ್ ಕರ್ಪ್ಯೂ ಸಮಯದಲ್ಲಿ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಕ್ಷೌರದಂಗಡಿಗಳನ್ನು ತೆರೆಯಲು ಅನುಮತಿ‌ ನೀಡಬೇಕೆಂದು ಭಂಡಾರಿ ಮಹಾಮಂಡಲ ಜಿಲ್ಲಾಡಳಿತಕ್ಕೆ ಮನವಿ‌ ಮಾಡಿದೆ.

ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಭಂಡಾರಿ ಮಹಾಮಂಡಲದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಚ್ಚೂರು ನಾಗೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದಶೀ ಸೋಮಶೇಖರ್ ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಅಶೋಕ್ ಭಂಡಾರಿ ಕುತ್ಪಾಡಿ , ಸ್ಪಂದನ ಭಂಡಾರಿ ಬಳಗದ ಅಧ್ಯಕ್ಷ ಅರುಣ್ ಭಂಡಾರಿ ಬೈಕಾಡಿ, ಮಹಾಮಂಡಲದ ಉಪಾಧ್ಯಕ್ಷ ಅರುಣ್ ಭಂಡಾರಿ ಪರ್ಕಳ.

ಪ್ರಧಾನ ಕಾರ್ಯದರ್ಶಿ ಸಂತೋಷ ಭಂಡಾರಿ ಕಟಪಾಡಿ, ಸವಿತಾ ಸಮಾಜ ಉಡುಪಿ ಜಿಲ್ಲಾ ಮಾಜಿ ಜಿಲ್ಲಾ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಅಂಗಡಿ, ದೇವಸ್ಥಾನದ ಪ್ರತಿನಿಧಿ ಕರುಣಾಕರ ಭಂಡಾರಿ ಬೈಕಾಡಿ, ಬ್ರಹ್ಮಾವರ ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಶಿವರಾಮ ಭಂಡಾರಿ ಹಂದಾಡಿ, ತಾಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷ ಶಂಕರ್ ಭಂಡಾರಿ ಮಣಿಪಾಲ ಇದ್ದರು.