ಮಂಗಳೂರಿನಲ್ಲಿ ತಡರಾತ್ರಿಯವರೆಗೆ ವ್ಯಾಪಾರಕ್ಕೆ ಅವಕಾಶ: ಪೊಲೀಸ್ ಆಯುಕ್ತರಿಂದ ಹೊಸ ಆದೇಶ

ಮಂಗಳೂರು: ಕರಾವಳಿಯ ಪ್ರಮುಖ ವಾಣಿಜ್ಯ ನಗರಿ ಮಂಗಳೂರಿನ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ನಗರ ಪೊಲೀಸ್ ಇಲಾಖೆ ಸಿಹಿಸುದ್ದಿ ನೀಡಿದೆ. ನಗರದಲ್ಲಿ ರಾತ್ರಿ ವ್ಯಾಪಾರ ವಹಿವಾಟು ನಡೆಸುವ ಸಂಬಂಧ ಈ ಹಿಂದೆ ಜಾರಿಯಲ್ಲಿದ್ದ ಸಮಯದ ನಿರ್ಬಂಧವನ್ನು ಸಡಿಲಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

ರಾತ್ರಿ 11.45ರವರೆಗೆ ಅಂಗಡಿ, ಹೋಟೆಲ್ ತೆರೆಯಲು ಅವಕಾಶ

ಈ ಹಿಂದೆ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ರಾತ್ರಿ 10 ಅಥವಾ 10.30ರ ವೇಳೆಗೆ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿತ್ತು. ಇದೀಗ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಮಯವನ್ನು ವಿಸ್ತರಿಸಲಾಗಿದೆ.

ನೂತನ ಆದೇಶದ ಪ್ರಕಾರ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟೀ ಸ್ಟಾಲ್‌ಗಳು ಹಾಗೂ ಪಾನ್ ಅಂಗಡಿಗಳು ರಾತ್ರಿ 11.45ರವರೆಗೆ ಕಾರ್ಯನಿರ್ವಹಿಸಬಹುದು. ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ವ್ಯಾಪಾರ ಚಟುವಟಿಕೆಗಳಿಗೆ ನಿರ್ಬಂಧ ಇರಲಿದೆ.

ಬಾರ್, ಮದ್ಯದಂಗಡಿಗಳಿಗೆ ವಿನಾಯಿತಿ ಇಲ್ಲ

ಸಮಯ ವಿಸ್ತರಣೆಯ ಸೌಲಭ್ಯ ಬಾರ್ ಮತ್ತು ಮದ್ಯದಂಗಡಿಗಳಿಗೆ ಅನ್ವಯಿಸುವುದಿಲ್ಲ. ಅವುಗಳು ತಮ್ಮ ಪರವಾನಗಿಯಲ್ಲಿ ನಿಗದಿಪಡಿಸಿರುವ ಸಮಯ ಮತ್ತು ಷರತ್ತುಗಳ ಪ್ರಕಾರವೇ ಕಾರ್ಯನಿರ್ವಹಿಸಬೇಕು. ಆಸ್ಪತ್ರೆಗಳು, ಔಷಧ ಅಂಗಡಿಗಳು, ತುರ್ತು ಸೇವೆಗಳು ಹಾಗೂ ವಿಶೇಷ ಅನುಮತಿ ಪಡೆದ ಸಂಸ್ಥೆಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ

ರಾತ್ರಿ ತಡವಾಗಿ ವ್ಯಾಪಾರ ನಡೆಸುವ ಅಂಗಡಿಗಳ ಸುತ್ತ ಅನಗತ್ಯವಾಗಿ ಜನರು ಗುಂಪುಗೂಡುವುದು, ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಹಾಗೂ ಕರ್ಕಶ ಹಾರ್ನ್ ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡುವುದನ್ನು ತಪ್ಪಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ. ವಿಶೇಷವಾಗಿ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸಮಾಜಘಾತುಕ ಚಟುವಟಿಕೆಗಳಿಗೆ ಅವಕಾಶ ನೀಡದೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ವ್ಯಾಪಾರಸ್ಥರ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 31(W) ಅಡಿಯಲ್ಲಿ ಹೊರಡಿಸಿರುವ ಈ ಪರಿಷ್ಕೃತ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.