ಪೆರ್ಡೂರು: ಬಾವಿಗೆ ಹಾರಿ ನವವಿವಾಹಿತೆ ಆತ್ಮಹತ್ಯೆ

ಹಿರಿಯಡ್ಕ: ಡೆತ್ ನೋಟ್ ಬರೆದಿಟ್ಟು ವಿವಾಹಿತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಡೂರು ಕೊಪ್ಪಳ ಮನೆ ಎಂಬಲ್ಲಿ ನಡೆದಿದೆ.

ಪೆರ್ಡೂರು ಕೊಪ್ಪಳ ಮನೆ ಲಲಿತ ಆಚಾರ್ಯ ಎಂಬವರ ಕಿರಿಯ ಮಗಳು ಮಾಲತಿ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಾಲತಿ 2021ರ ಜನವರಿ 18ರಂದು ಕೋಟ ಸಾಲಿಗ್ರಾಮದ ರಾಘವೇಂದ್ರ ಎಂಬವರನ್ನು ಮದುವೆಯಾಗಿದ್ದರು. ಇದೇ ಡಿ.12ರಂದು ಅಮ್ಮನ ನಾದಿನಿಯ ವೈಕುಂಟ ಕಾರ್ಯಕ್ರಮಕ್ಕೆ ಮಾಲತಿ ತವರು ಮನೆಗೆ ಬಂದಿದ್ದರು. ಮಾಲತಿ ಮಕ್ಕಳಾಗದೇ ಇರುವ ಬಗ್ಗೆ ಖಿನ್ನತೆಯಲ್ಲಿದ್ದರು. ಇದರಿಂದ ಯಾರ ಬಳಿಯೂ ಮಾತನಾಡದೆ ಮೌನವಾಗಿರುತ್ತಿದ್ದರು.

ಡಿ. 13ರಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿದ ಮಾಲತಿ, ಒಳಗೆ ಮಲಗಿದ್ದವರು. ಬಳಿಕ ಎದ್ದು ಬಂದು ಮನೆಯ ಜಗುಳಿಯ ಮೇಲೆ ಕುಳಿತುಕೊಂಡಿದ್ದರು. ಆದರೆ 3‌.45ಕ್ಕೆ ತಾಯಿ ಲಲಿತಾ ಆಚಾರ್ಯ ಹೊರಗೆ ಬಂದು ನೋಡಿದಾಗ ಮಾಲತಿ ಕಾಣೆಯಾಗಿದ್ದರು. ಬಳಿಕ ಹುಡುಕಾಟ ನಡೆಸಿದಾಗ ಬಾವಿಯ ಬಳಿ ಬಾವಿಯ ದಂಡೆಯ ಮೇಲೆ ಒಂದು ಹಾಳೆ ಹಾಗೂ ಮೊಬೈಲ್ ಕಂಡುಬಂದಿದೆ.‌ ಮಾಲತಿ ಮಕ್ಕಳು ಆಗದಿರುವುದಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾವಿಯ ಬಳಿ ಸಾಯುವ ಮುನ್ನ ಮಾಲತಿ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ “ನನಗೆ ಗರ್ಭಕೋಶದಲ್ಲಿ ಗಡ್ಡೆಯಿದೆ. ಇದರಿಂದ ಮಕ್ಕಳಾಗಲು ಕಷ್ಟ ಸಾಧ್ಯ. ಹಾಗೆಯೇ ಅಪ್ಪ ಅತ್ತೆ ತುಂಬಾ ನೆನಪಾಗುತ್ತಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ನಾನು ಸಾಯಲು ನಿರ್ಧರಿಸಿದ್ದೇನೆ.  ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ದೂಷಿಸಬೇಡಿ. ಎಲ್ಲರಿಗೂ SORRY. ಕ್ಷಮಿಸಿ ನನ್ನನ್ನು” ಎಂದು ಬರೆದಿದ್ದಾರೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.